ನವದೆಹಲಿ(ಆ.02): ಈವರೆಗೆ ಲಡಾಖ್‌ನಲ್ಲಿ ಭಾರತದ ಪಡೆಗಳ ಜತೆ ಸಂಘರ್ಷದಲ್ಲಿ ತೊಡಗಿದ್ದ ಚೀನಾ ಸೇನೆ ಈಗ ಉತ್ತರಾಖಂಡದ ಲಿಪುಲೇಖ್‌ ಪಾಸ್‌ನಲ್ಲಿ ತನ್ನ ಪಡೆಗಳನ್ನು ಜಮಾಯಿಸಿದೆ.

ಲಡಾಖ್‌ ಹೊರತುಪಡಿಸಿದರೆ ಇತ್ತೀಚೆಗೆ ಚೀನಾ ಸೇನೆಯು ಲಿಪುಲೇಖ್‌ ಪಾಸ್‌ನಲ್ಲಿ ಸಂಚಾರ ನಡೆಸುವ ಮಾಹಿತಿ ಲಭಿಸಿತ್ತು. ಇದರ ಬೆನ್ನಲ್ಲೇ ಈಗ ಇದೇ ಜಾಗದಲ್ಲಿ ಸುಮಾರು 1000 ಸೈನಿಕರ ಬೆಟಾಲಿಯನ್‌ ಬೀಡುಬಿಟ್ಟಿದೆ ಎಂದು ಬಲ್ಲ ಮೂಲಗಳು ಹೇಳಿವೆ.

ಇತ್ತೀಚೆಗೆ ಲಡಾಖ್‌ನ ಗಲ್ವಾನ್‌ ಗಡಿಯಿಂದ ಹಿಂದೆ ಸರಿಯಲು ಚೀನಾ ಸೇನೆ ಒಪ್ಪಿಕೊಂಡಿದ್ದರೂ ಹಿಂತೆಗೆತ ನಿಧಾನವಾಗಿದೆ. ಸೇನೆ ಗಡಿಯಲ್ಲೇ ಉಳಿದುಕೊಂಡು ಕೆಲವು ಮೂಲಸೌಕರ್ಯ ಕೆಲಸಕ್ಕೆ ಬೆಂಗಾವಲಾಗಿ ನಿಂತಿದೆ. ಇನ್ನೊಂದೆಡೆ ಲಿಪುಲೇಖ್‌ ಪಾಸ್‌ನ ಆಚೆ ಇರುವ ಗಡಿ ವಾಸ್ತವ ರೇಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀಡುಬಿಟ್ಟಿದೆ. ಉತ್ತರ ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದಲ್ಲೂ ಬೀಡುಬಿಟ್ಟಿದೆ ಎಂದು ಉನ್ನತ ಸೇನಾ ಅಧಿಕಾರಿಗಳು ಹೇಳಿದ್ದಾರೆ.

ಮತ್ತೊಂದು ಪಂಚ್: ಚೀನಾದಿಂದ ಟೀವಿ ಆಮದಿಗೂ ಬ್ರೇಕ್..!

‘ಲಡಾಖ್‌ ಹೊರತಾದ ಪ್ರದೇಶಗಳಲ್ಲಿ ಕೂಡ ಚೀನಾ ತನ್ನ ಸೇನೆಯ ಬಲ ಹೆಚ್ಚಿಸುತ್ತಿದೆ. ಹೀಗಾಗಿ ಇದು ಚೀನಾ ಗಡಿಯಲ್ಲಿ ಸನ್ನದ್ಧ ಸ್ಥಿತಿಯಲ್ಲಿರುವ ಸಂಕೇತ ಇದು. ಅಲ್ಲದೆ ಗಡಿಯ ಮೇಲೆ ಸದಾ ನಿಗಾ ಇಡಲೇಬೇಕು. ಸ್ವಲ್ಪ ಕೂಡ ನಿಗಾದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ’ ಎಂದು ಉನ್ನತ ಸೇನಾ ಅಧಿಕಾರಿ ಹೇಳಿದ್ದಾರೆ.ಕೈಲಾಸ ಮಾನಸ ಸರೋವರ ಯಾತ್ರೆ ಮಾರ್ಗದಲ್ಲಿ ಲಿಪುಲೇಖ್‌ ಪಾಸ್‌ ಇದ್ದು, ಇತ್ತೀಚೆಗೆ ಇಲ್ಲಿ ಭಾರತ 80 ಕಿ.ಮೀ. ರಸ್ತೆ ನಿರ್ಮಿಸುತ್ತಿತ್ತು. ಇದಕ್ಕೆ ಪಕ್ಕದ ದೇಶ ನೇಪಾಳ ಆಕ್ಷೇಪಿಸಿದ್ದರಿಂದ ಲಿಪುಲೇಖ್‌ ಪಾಸ್‌ ಸುದ್ದಿಯಲ್ಲಿತ್ತು.