ನವದೆಹಲಿ(ಆ.14): ಪೂರ್ವ ಲಡಾಖ್‌ ಗಡಿ ವಿವಾದದ ಹಿನ್ನೆಲೆಯಲ್ಲಿ ಅತ್ಯುನ್ನತ ಸನ್ನದ್ಧ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ವಾಯುಪಡೆ ಸೇನಾನಿಗಳಿಗೆ ವಾಯುಪಡೆ ಮುಖ್ಯಸ್ಥ ಆರ್‌.ಕೆ.ಎಸ್‌. ಭದೌರಿಯಾ ಅವರು ಸೂಚನೆ ನೀಡಿದ್ದಾರೆ. 

ವೆಸ್ಟರ್ನ್‌ ಕಮಾಂಡ್‌ ವ್ಯಾಪ್ತಿಯ ಮುಂಚೂಣಿ ವಾಯುನೆಲೆಯೊಂದರಲ್ಲಿ ಮಿಗ್‌ 21 ಬೈಸನ್‌ ವಿಮಾನವನ್ನು ಏಕಾಂಗಿಯಾಗಿ ಹಾರಿಸಿದ ಭದೌರಿಯಾ ಅವರು, ವಾಯುಪಡೆಯ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು. ಅತ್ಯಂತ ಸೂಕ್ಷ್ಮವಾಗಿರುವ ಲಡಾಖ್‌ ವಲಯ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳು ವೆಸ್ಟರ್ನ್‌ ಕಮಾಂಡ್‌ ವ್ಯಾಪ್ತಿಗೆ ಬರುತ್ತವೆ. 

ಮಿಗ್ 21 ಮೂಲಕ ಗಡಿಯಲ್ಲಿ IAF ಮುಖ್ಯಸ್ಥ RKS ಬದೌರಿಯಾ ಹಾರಾಟ; ಸಿದ್ಧತೆ ಪರಿಶೀಲನೆ!

ಚೀನಾ ಜತೆಗೆ 3 ತಿಂಗಳಿನಿಂದ ಗಡಿ ವಿವಾದ ಇರುವ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿನ ಎಲ್ಲ ವಾಯುನೆಲೆಗಳನ್ನು ವಾಯುಪಡೆ ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ. ಭದೌರಿಯಾ ಅವರು ಯಾವ ವಾಯುನೆಲೆಯಲ್ಲಿ ಯುದ್ಧ ವಿಮಾನ ಹಾರಿಸಿದರು ಎಂಬ ಬಗ್ಗೆ ವಾಯುಪಡೆ ಮಾಹಿತಿ ನೀಡಿಲ್ಲ.

ಚೀನಾದ ಪೆಟ್ರೋಲ್ ಟ್ಯಾಂಕರ್‌ಗಳಿಗೆ ಭಾರತದ ಬಹಿಷ್ಕಾರ

ನವದೆಹಲಿ: ಇತ್ತೀಚಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ಕಂಪನಿಗಳು ಚೀನಾ ಮೂಲದ ಬಾಡಿಗೆ ತೈಲ ಟ್ಯಾಂಕರ್‌ಗಳ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ.

ಲಡಾಖ್‌ ಗಡಿಯಲ್ಲಿ ಭಾರತದ 20 ಸೈನಿಕರನ್ನು ಚೀನಾದ ಸೇನೆ ಹತ್ಯೆ ಮಾಡಿದ ಬಳಿಕ ಚೀನಾದ ಜೊತೆಗಿನ ವ್ಯಾಪಾರ ವಹಿವಾಟನ್ನು ಭಾರತ ಕಡಿತಗೊಳಿಸುತ್ತಿದೆ. ಇದರ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದೆ. ಚೀನಾದ ಕಂಪನಿಗಳ ಒಡೆತನದ ತೈಲ ಟ್ಯಾಂಕರ್‌ಗಳು ಇನ್ನೊಂದು ದೇಶಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದರೂ ಅವುಗಳ ಬಳಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. 

ಚೀನಾದ ಬಾಡಿಗೆ ತೈಲ ಟ್ಯಾಂಕರ್‌ಗಳ ಮೇಲೆ ಭಾರತೀಯ ತೈಲ ಕಂಪನಿಗಳ ಅವಲಂಬನೆ ತೀರಾ ಕಡಿಮೆ ಪ್ರಮಾಣದಲ್ಲಿದೆ. ಹೀಗಾಗಿ ಈ ನಿರ್ಧಾರದಿಂದ ತೈಲ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಮೂಲಗಳು ತಿಳಿಸಿವೆ.