ನವದೆಹಲಿ(ಜೂ. 18) ಕಾಲು ಕೆದರಿಕೊಂಡು ಸಂಘರ್ಷಕ್ಕೆ ಬರುತ್ತಿರುವ ಚೀನಾ  ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿದ್ದಾರೆ.

ಗ್ವಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಸೈನಿಕರನ್ನು ಹಿಂದೆ ಕಳುಹಿಸಲು ಹೋದ ಭಾರತೀಯ ಸೈನಿಕರು ಏಕೆ ನಿರಾಯುಧರಾಗಿದ್ದರು? ಆಯುಧಗಳಿಲ್ಲದೇ ಅವರನ್ನು ಏಕೆ ಕಳುಹಿಸಿದ್ದು? ಇದರ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ? ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಕುತಂತ್ರಿ ಚೀನಾ ಈಗ ಮಾಡುತ್ತಿರುವ ಕೆಲಸ ಏನು?

ಸೋಶಿಯಲ್ ಮೀಡಿಯಾ ಮುಖೇನ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಬಾಣ ಎಸೆದಿರುವ ಗಾಂಧಿ, ಕಲ್ಲು ಮತ್ತು ದೊಣ್ಣೆಗಳಿಂದ ಬಡಿದಾಡಿದರು, ಅನೇಕರು ನದಿಯಲ್ಲಿ ಕೊಚ್ಚಿಕೊಂಡು ಹೋದರು ಎಂದು  ವರದಿಯಾಗಿದೆ, ಇದೆಲ್ಲ ಹೇಗೆ ಸಾಧ್ಯ ಎಂದು ಕೇಳಿದ್ದಾರೆ.

ಲಡಾಖ್‌ ಕಣಿವೆಯಲ್ಲಿ ಭಾರತೀಯ ಸೈನಿಕರು ಹತ್ಯೆಯಾದರೂ, ಚೀನಾ ಹೆಸರನ್ನು ಎಲ್ಲಿಯೂ ಹೇಳದ  ಉಲ್ಲೇಖಿಸದ  ಸಚಿವ ರಾಜನಾಥ್ ಸಿಂಗ್  ಮೇಲೆಯೂ ಕೆಂಡ ಕಾರಿರುವ ಗಾಂಧಿ ದೇಶಕ್ಕೆ ಮಾಡಿದ ಅಪಮಾನ ಇದು ಎಂದು ಆಕ್ರೋಶ ಹೊರಹಾಕಿದ್ದಾರೆ.

ನಮ್ಮ ದೇಶದ ಸೈನಿಕರನ್ನು ಕಳೆದುಕೊಂಡ ನೋವು ಹೇಳಲು ಸಾಧ್ಯವಿಲ್ಲ  ಎಂದು ಗಾಂಧಿ ಹೇಳಿದ್ದಾರೆ. ಲಡಾಕ್ ಗಡಿ ಪ್ರದೇಶದಲ್ಲಿ  ಸಂಘರ್ಷದ ವಾತಾವರಣ ನಿರ್ಮಾಣ ಆಗಿದ್ದು ಭಾರತ ಮತ್ತು ಚೀನಾ ಎರಡು ದೇಶಗಳು ಸೈನ್ಯದ ಜಮಾವಣೆ ಮಾಡಿವೆ.   ಹಿಂದಿನ ಒಪ್ಪಂದದ ಪ್ರಕಾರ ಭಾರತ ಮತ್ತು ಚೀನಾ ಗಡಿಯಲ್ಲಿ ಗುಂಡು ಹಾರಿಸುವಂತೆ ಇಲ್ಲ.