ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಾ, ಮೆಕ್ಸಿಕೋ ಮತ್ತು ಚೀನಾ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ತೆರಿಗೆ ವಿಧಿಸಿದ್ದಾರೆ. ಆದರೆ ಭಾರತಕ್ಕೆ ಈ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ಇದಕ್ಕೆ ಪ್ರಧಾನಿ ಮೋದಿ ಮತ್ತು ಟ್ರಂಪ್ ನಡುವಿನ ಸ್ನೇಹ ಹಾಗೂ ಭಾರತದ ಬಜೆಟ್‌ನಲ್ಲಿ ಅಮೆರಿಕದ ಕೆಲವು ವಸ್ತುಗಳ ಮೇಲಿನ ತೆರಿಗೆ ಕಡಿತ ಕಾರಣ ಎನ್ನಲಾಗಿದೆ.
ನವದೆಹಲಿ (ಫೆ.3): ಅಮೆರಿಕದ ಉತ್ಪನ್ನಗಳ ಮೇಲೆ ದುಬಾರಿ ತೆರಿಗೆ ವಿಧಿಸುವ ದೇಶಗಳಿಗೆ ಪ್ರತೀಕಾರದ ರೂಪದಲ್ಲಿ ಭಾರೀ ತೆರಿಗೆ ವಿಧಿಸುವ ಎಚ್ಚರಿಕೆ ನೀಡುತ್ತಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಅದನ್ನು ಘೋಷಿಸಿದ್ದಾರೆ. ಮುಂದಿನ ಮಂಗಳವಾರದಿಂದಲೇ ಜಾರಿಗೆ ಬರುವಂತೆ ಕೆನಡಾ, ಮೆಕ್ಸಿಕೋ ಮತ್ತು ಚೀನಾ ದೇಶಗಳಿಂದ ಆಮದಾಗುವ ವಸ್ತುಗಳ ಮೇಲೆ ಅವರು ಕ್ರಮವಾಗಿ ಶೇ.25, ಶೇ.25 ಮತ್ತು ಶೇ.10ರಷ್ಟು ತೆರಿಗೆ ವಿಧಿಸಿದ್ದಾರೆ. ಆದರೆ ಟ್ರಂಪ್‌ರ ಈ ತೆರಿಗೆ ಏಟಿಂದ ಸದ್ಯಕ್ಕೆ ಭಾರತ ಪಾರಾಗಿದೆ.
ಚುನಾವಣೆ ಪೂರ್ವ ಮತ್ತು ಚುನಾವಣೆ ಗೆದ್ದ ಬಳಿಕವೂ ಹಲವು ಬಾರಿ ಟ್ರಂಪ್ ಅವರು ಭಾರತ, ಚೀನಾ, ಬ್ರೆಜಿಲ್‌ನಂಥ ದೇಶಗಳು ಅಮೆರಿಕದ ವಸ್ತುಗಳ ಮೇಲೆ ಭಾರೀ ತೆರಿಗೆ ಹಾಕುತ್ತಿವೆ. ಅದನ್ನೆಲ್ಲಾ ನಾವು ನೋಡುತ್ತಾ ಕೂರುವ ಸಮಯ ಮುಗಿಯಿತು ಎಂದು ಎಚ್ಚರಿಸುವ ಮೂಲಕ ಭಾರತದ ಮೇಲೂ ತೆರಿಗೆ ವಿಧಿಸುವ ಸುಳಿವು ನೀಡಿದ್ದರು.
ಇದನ್ನೂ ಓದಿ: ಟ್ರಂಪ್ ತೆರಿಗೆ ಬೆದರಿಕೆಗೆ ಮೋದಿ ಸರ್ಕಾರ ಅಮೆರಿಕ ಉತ್ಪನ್ನಗಳ ಮೇಲೂ ತೆರಿಗೆ ಕಡಿತಕ್ಕೆ ಚಿಂತನೆ?
ಆದರೆ ಶನಿವಾರ ಘೋಷಿಸಿದ ಹೊಸ ತೆರಿಗೆ ಯುದ್ಧದಿಂದ ಅವರು ಭಾರತವನ್ನು ಹೊರಗಿಟ್ಟಿದ್ದಾರೆ. ಇದಕ್ಕೆ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಿದ ಸ್ನೇಹ ಮತ್ತು ಶನಿವಾರ ಭಾರತ ಮಂಡಿಸಿದ ಬಜೆಟ್‌ನಲ್ಲಿ ಅಮೆರಿಕದ ಹಾರ್ಲೆ ಡೇವಿಡ್ಸನ್ ಬೈಕ್, ಟೆಸ್ಲಾ ಕಾರು, ಉಪಗ್ರಹ ಕೇಂದ್ರ ಸಂಬಂಧಿತ ವಸ್ತುಗಳು ಮತ್ತು ಇತರೆ ಕೆಲವು ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡಿದ್ದು ಕಾರಣ ಎನ್ನಲಾಗಿದೆ. ಜೊತೆಗೆ ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಪರಸ್ಪರ ತೆರಿಗೆ ಕಡಿತ ಸಂಬಂಧ ಉಭಯ ದೇಶಗಳು ಮಾತುಕತೆ ನಡೆಸುವ ಸಾಧ್ಯತೆ ಇರುವುದು ಕೂಡ ಕಾರಣ ಎಂದು ಹೇಳಲಾಗಿದೆ. ಇನ್ನೊಂದೆಡೆ ಅತ್ತ ಚೀನಾದ ಮೇಲೆ ಶೇ.10ರಷ್ಟು ಸುಂಕ ಹೇರಿರುವುದರಿಂದ ಅಮೆರಿಕಕ್ಕೆ ತನ್ನ ರಫ್ತನ್ನು ಹೆಚ್ಚಿಸುವ ಅವಕಾಶ ಭಾರತಕ್ಕೆ ಸಿಗಲಿದೆ ಎನ್ನಲಾಗಿದೆ.
ಇದನ್ನೂ ಓದಿ: Watch | US ಸೆನೆಟ್‌ನಲ್ಲಿ 'ಜೈ ಶ್ರೀಕೃಷ್ಣ' ಎಂದ ವಿಡಿಯೋ ವೈರಲ್, ಭಾರತೀಯ ಮೂಲದ ಈ ಕಾಶ್ ಪಟೇಲ್ ಯಾರು?
