ಗುಡಗಾಂವ್‌(ಜು.13):  ಕೊರೋನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ದೇಶವು ದೃಢನಿಶ್ಚಯ ಹಾಗೂ ಉತ್ಸಾಹದಿಂದ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಕೇಂದ್ರೀಯ ಸಶಸ್ತ್ರ ಮೀಸಲು ಪಡೆ ದೇಶಾದ್ಯಂತ ಮಾಸಾಂತ್ಯದೊಳಗೆ 1.37 ಕೋಟಿ ಸಸಿ ನಡೆಡುವ ಆಂದೋಲನ ಆರಂಭಿಸಿದ್ದು, ಇದಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಶಾ, ‘ವಿಶ್ವವು ಇಂದು ಕೊರೋನಾ ವಿರುದ್ಧ ಎಲ್ಲಿ ಯಶಸ್ವಿ ಹೋರಾಟ ನಡೆದಿದೆ ಎಂದು ನೋಡಿದರೆ, ಅದು ಭಾರತಲ್ಲಿ ನರೇಂದ್ರ ಮೋದಿ ಅವರ ನಾಯಕತ್ವದ ಅಡಿ ಎಂದು ತಿಳಿದುಬರುತ್ತದೆ’ ಎಂದರು.

‘ಭಾರತ 130 ಕೋಟಿ ಜನಸಂಖ್ಯೆ ಹೊಂದಿದ ದೊಡ್ಡ ದೇಶ. ಒಕ್ಕೂಟ ವ್ಯವಸ್ಥೆಯ ದೇಶವಿದು. ಇಂಥ ದೊಡ್ಡ ದೇಶವು ಕೊರೋನಾ ವೈರಸ್‌ ಸವಾಲನ್ನು ಹೇಗೆ ಎದುರಿಸಲಿದೆ ಎಂದು ಭಯಪಡಲಾಗಿತ್ತು. ಆದರೆ 130 ಕೋಟಿ ಜನ, ಎಲ್ಲ ರಾಜ್ಯಗಳು ‘ಏಕದೇಶ’ ಎಂಬ ಪರಿಕಲ್ಪನೆಯಲ್ಲಿ ಕೋವಿಡ್‌-19 ವಿರುದ್ಧ ಹೋರಾಡಿದ್ದಾರೆ’ ಎಂದು ಹೇಳಿದರು.

ಕೊರೋನಾ ಚಿಕಿತ್ಸೆ: ಉಲ್ಟಾ ಹೊಡೆದ ಖಾಸಗಿ ಆಸ್ಪತ್ರೆಗಳು

‘ಜಗತ್ತಿನಾದ್ಯಂತ ಸರ್ಕಾರಗಳು ಈ ವ್ಯಾಧಿ ವಿರುದ್ಧ ಹೋರಾಡುತ್ತಿವೆ. ಆದರೆ ನಮ್ಮ ದೇಶದಲ್ಲಿ ಪ್ರತಿ ವ್ಯಕ್ತಿ ಕೈಜೋಡಿಸಿದ್ದಾರೆ. ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವು ಇಂದು ಉತ್ತಮ ಸ್ಥಿತಿಯಲ್ಲಿದ್ದೇವೆ. ಬದ್ಧತೆಯೊಂದಿಗೆ ಹೋರಾಟ ನಡೆದಿದೆ. ಭಯದ ವಾತಾವರಣವಿಲ್ಲ. ಅದನ್ನು ಸೋಲಿಸುವ ಉಮೇದಿ ನಮ್ಮಲ್ಲಿದೆ. ಸಶಸ್ತ್ರ ಪಡೆಗಳು ಇದರ ವಿರುದ್ಧದ ಯುದ್ಧದಲ್ಲಿ ದೊಡ್ಡ ಪಾತ್ರ ಹೊಂದಿವೆ’ ಎಂದರು.

‘ಕೊರೋನಾ ಮಾನವ ಕುಲಕ್ಕೇ ದೊಡ್ಡ ಸವಾಲು. ಇದರ ವಿರುದ್ಧ ಹೋರಾಡುವಾಗ ಸಶಸ್ತ್ರ ಪಡೆಗಳ ಯೋಧರೂ ಜೀವ ತ್ಯಾಗ ಮಾಡಿದ್ದಾರೆ. ನಿಮ್ಮ ತ್ಯಾಗ ವ್ಯರ್ಥವಾಗಲ್ಲ. ಅದನ್ನು ಸುವರ್ಣಾಕ್ಷರದಲ್ಲಿ ಬರೆದಿಡಲಾಗವುದು’ ಎಂದು ಹೇಳಿದರು.