ಭಾರತಕ್ಕೆ ಬಂತು ಮೊದಲ ಕೋವಿಡ್‌ ಗುಳಿಗೆ ಒಂದೇ ದಿನ 2 ಕೋವಿಡ್‌ ಲಸಿಕೆ, 1 ಗುಳಿಗೆಗೆ ಅನುಮತಿಗೆ ಶಿಫಾರಸು ಕೋವೋವ್ಯಾಕ್ಸ್‌, ಕೋರ್ಬೆವ್ಯಾಕ್ಸ್‌, ಮೋಲ್ನುಪಿರಾವಿರ್‌ಗೆ ಅನುಮತಿ

ನವದೆಹಲಿ(ಡಿ.29): ದೇಶದಲ್ಲಿ ಒಮಿಕ್ರೋನ್‌ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಣ ಸಂಸ್ಥೆಯು, ಒಂದೇ ದಿನ ಎರಡು ಕೋವಿಡ್‌ ಲಸಿಕೆ ಮತ್ತು ಒಂದು ಕೋವಿಡ್‌ ಗುಳಿಗೆಯನ್ನು ತುರ್ತು ಬಳಕೆಗೆ ಅವಕಾಶ ಮಾಡಿಕೊಡಲು ಶಿಫಾರಸು ನೀಡಿದೆ. ಇದನ್ನು ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿದರೆ ಈ ಮೂರು ಔಷಧಗಳು ಬಳಕೆಗೆ ಶೀಘ್ರವೇ ಲಭ್ಯವಾಗಲಿದೆ.

ಕೋವಿಡ್‌ ಲಸಿಕೆ ಕುರಿತ ವಿಷಯ ತಜ್ಞರ ತಂಡವು, ಸೀರಂ ಇನ್ಸಿಸ್ಟಿಟ್ಯೂಟ್‌ನ ಕೋವೋವ್ಯಾಕ್ಸ್‌, ಬಯಾಲಾಜಿಕಲ್‌- ಇ ಲ್ಯಾಬ್‌ನ ಕೋರ್ಬೆವ್ಯಾಕ್‌ ಮತ್ತು ಅಮೆರಿಕದ ಮೋಲ್ನುಪಿರಾವಾರ್‌ಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿದೆ. ಕೋವೋವ್ಯಾಕ್ಸ್‌ ಲಸಿಕೆಯನ್ನು ಪುಣೆಯ ಸೀರಂ ಸಂಸ್ಥೆ ಉತ್ಪಾದಿಸುತ್ತಿದೆ. ಕೋರ್ಬೆವ್ಯಾಕ್ಸ್‌ ಸ್ವದೇಶಿ ಉತ್ಪಾದಿತ ಲಸಿಕೆಯಾಗಿದ್ದು ರೆಡ್‌ಬ್ಯಾಕ್‌ ಸಂಸ್ಥೆ ಹೈದರಾಬಾದ್‌ನ ಬಯೋಲಾಜಿಕಲ್‌ ಇ ಸಂಸ್ಥೆಯಲ್ಲಿ ತಯಾರುಮಾಡುತ್ತಿದೆ. ಇದು ಭಾರತದ 3ನೇ ಸ್ವದೇಶಿ ಲಸಿಕೆಯಾಗಿದೆ. ಅಮೆರಿಕ ಮೂಲದ ಮೆರ್ಕ್ ಮತ್ತು ರೆಡ್ಜ್‌ಬ್ಯಾಕ್‌ ಔಷಧ ಕಂಪನಿಗಳು ಜಂಟಿಯಾಗಿ ಮೋಲ್ನುಪಿರಾವಿರ್‌ ಗುಳಿಗೆಯನ್ನು ಅಭಿವೃದ್ಧಿ ಪಡಿಸಿವೆ.

ರೂಪಾಂತರಿ ತಡೆಗೆ ನೈಟ್ ಕರ್ಫ್ಯೂ, ಏನೆಲ್ಲ ಹೊಸ ನಿಯಮ?

ಮೊದಲ ಗುಳಿಗೆ: ಮೋಲ್ನುಪಿರಾವಿರ್‌ ಗುಳಿಗೆಯನ್ನು ವಯಸ್ಕ ಕೋವಿಡ್‌ ಸೋಂಕಿತ ವ್ಯಕ್ತಿಯ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಶೇ.93ಕ್ಕೆ ಕುಸಿದಿದ್ದರೆ ಅಥವಾ ಸೋಂಕಿತ ಆಸ್ಪತ್ರೆಗೆ ದಾಖಲಾಗಿ ಗಂಭೀರ ಸ್ಥಿತಿಯಲ್ಲಿದ್ದಾಗ ಮಾತ್ರ ಮಾತ್ರೆಯನ್ನು ಬಳಕೆ ಮಾಡಬಹುದು. 18 ವರ್ಷಕ್ಕಿಂತ ಕಡಿಮೆ ವಯೋಮಾನದ ರೋಗಿಗಳ ಮೇಲೆ ಗುಳಿಗೆ ಪ್ರಯೋಗ ಮಾಡಬಾರದು ಎಂದು ಕಂಪನಿ ತಿಳಿಸಿದೆ. ಡಿಸಿಜಿಐ ಅನುಮೋದನೆ ಬಳಿಕ ಗುಳಿಗೆಯು ಬಳಕೆ ಅರ್ಹತೆ ಪಡೆಯಲಿದೆ.

ಕರ್ನಾಟಕದಲ್ಲಿ ಹೀಗಿದೆ ಕೊರೋನಾ:

ರಾಜ್ಯದಲ್ಲಿ ಕೊರೋನಾ (Coronavirus) ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು, ಮಂಗಳವಾರ 356 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 30,05,232ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 38,318ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೆಲ್ತ್‌ ಬುಲೆಟಿನ್ ಹೊರಡಿಸಿದೆ. 

ಇದುವರೆಗೆ ರಾಜ್ಯದಲ್ಲಿ 30,05,23 ಸೋಂಕಿತರ ಪೈಕಿ 2959429 ಜನ ಗುಣಮುಖರಾಗಿದ್ದಾರೆ. ಇದರಿಂದ ರಾಜ್ಯದಲ್ಲಿ 7456 ಸಕ್ರಿಯ ಪ್ರಕರಗಳಿವೆ. ಇನ್ನು ಬೆಂಗಳೂರಿನಲ್ಲಿ (Benglauur) ಮಂಗಳವಾರ 269 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ನಗರದಲ್ಲಿ ಸೋಂಕಿತರ ಸಂಖ್ಯೆ 12,61,997ಕ್ಕೆ ಏರಿಕೆಯಾಗಿದೆ. ಇಂದು ನಗರದಲ್ಲಿ ಕೊರೋನಾದಿಂದ ಒಬ್ಬರು ಮೃತಪಟ್ಟಿದ್ದಾರೆ.