Asianet Suvarna News Asianet Suvarna News

ಪಾಕ್‌ ಗಡಿಯಲ್ಲೂ ಶಾಂತಿ: ಚೀನಾ ನಂತರ ಇನ್ನೊಂದು ತಂಟೆಕೋರ ದೇಶ ಶಾಂತ!

ಪಾಕ್‌ ಗಡಿಯಲ್ಲೂ ಶಾಂತಿ!| ಚೀನಾ ನಂತರ ಇನ್ನೊಂದು ತಂಟೆಕೋರ ದೇಶ ಶಾಂತ| ‘ಕದನ ವಿರಾಮ’ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧಾರ

India and Pakistan agree to stop cross border firing in Kashmir pod
Author
Bangalore, First Published Feb 26, 2021, 7:29 AM IST

ನವದೆಹಲಿ(ಫೆ.26): ಪೂರ್ವ ಲಡಾಖ್‌ ಗಡಿಯಲ್ಲಿ ಭಾರತ- ಚೀನಾ ನಡುವೆ ಉದ್ಭವವಾಗಿದ್ದ ಸಂಘರ್ಷ ತಿಳಿಯಾಗುತ್ತಿರುವ ನಡುವೆಯೇ, ಇದೀಗ ಪಾಕಿಸ್ತಾನ ಗಡಿಯಿಂದಲೂ ಶುಭ ಸುದ್ದಿ ಬಂದಿದೆ. ಕದನ ವಿರಾಮ ಸಂಬಂಧ 2003ರಲ್ಲಿ ಮಾಡಿಕೊಂಡಿರುವ ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸಲು ಭಾರತ ಹಾಗೂ ಪಾಕಿಸ್ತಾನ ಒಮ್ಮತದ ನಿರ್ಧಾರಕ್ಕೆ ಬಂದಿವೆ.

ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಹಾಗೂ ಇನ್ನಿತರೆ ಪ್ರದೇಶಗಳಲ್ಲಿ ಕದನ ವಿರಾಮ ಒಪ್ಪಂದಗಳ ಪಾಲನೆ ಕುರಿತ ಹೊಸ ನಿರ್ಧಾರ ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಭಾರತ ಹಾಗೂ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು, ಗುರುವಾರ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಉಭಯ ದೇಶಗಳು 2003ರಲ್ಲೇ ಕದನ ವಿರಾಮ ಒಪ್ಪಂದ ಮಾಡಿಕೊಂಡಿವೆಯಾದರೂ ಅದು ಪಾಲನೆಯಾಗಿದ್ದಕ್ಕಿಂತ ಉಲ್ಲಂಘನೆಯಾಗಿದ್ದೇ ಹೆಚ್ಚು. ಕಳೆದ 3 ವರ್ಷಗಳಲ್ಲಿ ಗಡಿಯಲ್ಲಿ 10752 ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆದಿದ್ದು, 72 ಭದ್ರತಾ ಸಿಬ್ಬಂದಿ ಹಾಗೂ 70 ನಾಗರಿಕರು ಹತರಾಗಿದ್ದಾರೆ. 364 ಭದ್ರತಾ ಸಿಬ್ಬಂದಿ, 341 ನಾಗರಿಕರು ಗಡಿಯಾಚೆಯಿಂದ ನಡೆದ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್‌ ರೆಡ್ಡಿ ಅವರು ಕಳೆದ ತಿಂಗಳಷ್ಟೇ ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದರು. ಉಭಯ ದೇಶಗಳ ಹೊಸ ಒಪ್ಪಂದದಿಂದಾಗಿ ಇಂತಹ ಅಪ್ರಚೋದಿತ ಗುಂಡು, ಶೆಲ್‌ ದಾಳಿಗಳು ಇನ್ನು ಮುಂದಾದರೂ ನಿಂತು, ಗಡಿ ಪ್ರದೇಶದಲ್ಲಿ ವಾಸಿಸುವ ಜನರು ನೆಮ್ಮದಿಯಿಂದ ಬಾಳುವ ವಾತಾವರಣ ನಿರ್ಮಾಣವಾಗಬಹುದು ಎಂಬ ಆಶಾವಾದ ಗರಿಗೆದರಿದೆ.

ಹಾಟ್‌ಲೈನ್‌ನಲ್ಲಿ ಮಾತುಕತೆ:

ಭಾರತ- ಪಾಕಿಸ್ತಾನ ಡಿಜಿಎಂಗಳು ಈಗಾಗಲೇ ಎರಡೂ ದೇಶಗಳ ನಡುವೆ ಇರುವ ಹಾಟ್‌ಲೈನ್‌ ಮೂಲಕ ಸಭೆ ನಡೆಸಿದರು. ಗಡಿ ನಿಯಂತ್ರಣ ರೇಖೆ ಹಾಗೂ ಇನ್ನಿತರೆ ಎಲ್ಲ ವಲಯಗಳಲ್ಲಿನ ಪರಿಸ್ಥಿತಿ ಕುರಿತು ಮುಕ್ತ, ತೆರೆದ ಮನಸ್ಸಿನೊಂದಿಗೆ ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆಸಿದರು. ಎರಡೂ ದೇಶಗಳ ಅನುಕೂಲ ದೃಷ್ಟಿಯಿಂದ ಹಾಗೂ ಗಡಿಯಲ್ಲಿ ಸುಸ್ಥಿರ ಶಾಂತಿ ಕಾಪಾಡಿಕೊಳ್ಳುವ ಉದ್ದೇಶದಿಂದ ಕದನ ವಿರಾಮಕ್ಕೆ ಸಂಬಂಧಿಸಿದ ಎಲ್ಲ ಒಪ್ಪಂದಗಳು, ತಿಳಿವಳಿಕೆಗಳನ್ನು ಕಟ್ಟುನಿಟ್ಟಾಗಿ ಫೆ.24/25ರ ರಾತ್ರಿಯಿಂದಲೇ ಕಟ್ಟುನಿಟ್ಟಾಗಿ ಪಾಲಿಸಲು ನಿರ್ಧರಿಸಿದರು ಎಂದು ಜಂಟಿ ಹೇಳಿಕೆ ತಿಳಿಸಿದೆ.

ಉಭಯ ದೇಶಗಳ ನಡುವೆ ಯಾವುದೇ ರೀತಿಯ ತಪ್ಪು ಗ್ರಹಿಕೆ ಅಥವಾ ಅನೂಹ್ಯ ಪರಿಸ್ಥಿತಿ ಸೃಷ್ಟಿಯಾದಾಗ ಅದನ್ನು ಬಗೆಹರಿಸಿಕೊಳ್ಳಲು ಈಗ ಇರುವ ಹಾಟ್‌ಲೈನ್‌ ವ್ಯವಸ್ಥೆ ಹಾಗೂ ಗಡಿ ಧ್ವಜ ಸಭೆಗಳನ್ನು ಬಳಸಿಕೊಳ್ಳುವ ಕುರಿತು ಬದ್ಧತೆ ವ್ಯಕ್ತಪಡಿಸಲಾಗಿದೆ.

Follow Us:
Download App:
  • android
  • ios