ಒಂದೇ ದಿನ 1 ಕೋಟಿಗಿಂತ ಹೆಚ್ಚು ಡೋಸ್‌ ಲಸಿಕೆ ಅಭಿಯಾನ ಆರಂಭದ ಬಳಿಕ 5ನೇ ಸಲ ಈ ದಾಖಲೆ ಒಮಿಕ್ರೋನ್‌ ಪತ್ತೆ ಬೆನ್ನಲ್ಲೇ ಮತ್ತೆ ಲಸಿಕೆಗೆ ಮುಗಿಬಿದ್ದ ಜನ

ನವದೆಹಲಿ(ಡಿ.05): ದೇಶದಲ್ಲಿ ಒಮಿಕ್ರೋನ್‌ ವೈರಸ್‌ ಪತ್ತೆ ಬೆನ್ನಲ್ಲೇ, ಕುಂಠಿತಗೊಂಡಿದ್ದ ಲಸಿಕಾ ಅಭಿಯಾನಕ್ಕೆ ಮತ್ತೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶನಿವಾರ ಒಂದೇ ದಿನ 1 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಇದರೊಂದಿಗೆ 2 ತಿಂಗಳ ಬಳಿಕ ಮೊದಲ ಬಾರಿಗೆ 1 ಕೋಟಿಗಿಂತ ಹೆಚ್ಚು ಡೋಸ್‌ ನೀಡಿದಂತಾಗಿದೆ. ಜೊತೆಗೆ ಇದುವರೆಗೆ ನೀಡಲಾದ ಒಟ್ಟು ಲಸಿಕೆಯ ಪ್ರಮಾಣ 127.5 ಕೋಟಿ ಡೋಸ್‌ ದಾಟಿದೆ.

ಈ ಸಂಬಂಧ ಶನಿವಾರ ಟ್ವೀಟ್‌ ಮಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ, ‘ಶನಿವಾರ ರಾತ್ರಿ 8.15ರ ವೇಳೆಗೆ 1 ಕೋಟಿಗಿಂತ ಹೆಚ್ಚು ಡೋಸ್‌ ನೀಡಲಾಗಿದೆ. ಈ ಮೂಲಕ ಲಸಿಕೆ ಅಭಿಯಾನ ಆರಂಭವಾಗಿ ಈವರೆಗೆ 5ನೇ ಸಲ ಒಂದು ದಿನದಲ್ಲಿ 1 ಕೋಟಿಗಿಂತ ಹೆಚ್ಚು ಲಸಿಕೆ ಡೋಸ್‌ ನೀಡಲಾಗಿದೆ. ತನ್ಮೂಲಕ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಹೊಸ ಎತ್ತರಕ್ಕೆ ತಲುಪುತ್ತಿದೆ’ ಎಂದು ಹರ್ಷಿಸಿದ್ದಾರೆ.

Scroll to load tweet…

ಈ ಹಿಂದೆ ಆ.27ರಂದು ದೇಶಾದ್ಯಂತ 1 ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡಲಾಗಿತ್ತು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಸೆ.17ರಂದು ದೇಶದಲ್ಲಿ 2 ಕೋಟಿ ಜನಕ್ಕೆ ಲಸಿಕೆ ನೀಡಲಾಗಿತ್ತು.

ಕರ್ನಾಟಕದಲ್ಲಿ ಒಮಿಕ್ರೋನ್:

ಭಾರತದಲ್ಲಿ ಮೊದಲೆರೆಡು ಪ್ರಕರಣ ದಾಖಲಾಗಿರುವುದು ಕರ್ನಾಟಕದ ಬೆಂಗಳೂರಿನಲ್ಲಿ. ಸೌತ್ ಆಫ್ರಿಕಾದಿಂದ 66 ವರ್ಷದ ವ್ಯಕಿಗೆ ನವೆಂಬರ್ 20 ರಂದು ಬೆಂಗಳೂರಿಗೆ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಇವರ ಮಾದಿರ ಸಂಗ್ರಹಿಸಿ ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿತ್ತು. RT PCR ವರದಿ ನೆಗಟೀವ್ ಕಾರಣ ಈ ವ್ಯಕ್ತಿ ದುಬೈಗೆ ತೆರಳಿದ್ದಾರೆ.

ಮತ್ತೊರ್ವ 46 ವರ್ಷದ ವೈದ್ಯ ವಿದೇಶಕ್ಕೆ ಹೋಗಿಲ್ಲ, ವಿದೇಶಿಗರ ಸಂಪರ್ಕಕ್ಕೂ ಬಂದಿಲ್ಲ, ಆದರೂ ಓಮಿಕ್ರಾನ್ ವೈರಸ್ ಕಾಣಿಸಿಕೊಂಡಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪತ್ನಿಗೆ ಕೊರೋನಾ ಕಾಣಿಸಿಕೊಂಡಿದೆ. ಇತ್ತ ಇವರ ಸಂಪರ್ಕಿತರನ್ನು ಪರೀಕ್ಷಿಸಲಾಗಿದ್ದು ಐವರಿಗೆ ಕೊರೋನಾ ದೃಢಪಟ್ಟಿದೆ. ಇವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿದೆ.

ಮುಂಬೈನಲ್ಲಿ 4ನೇ ಕೇಸ್:

ಕರ್ನಾಟಕ, ಗುಜರಾತ್ ಬಳಿಕ ಇದೀಗ ಮಹಾರಾಷ್ಟ್ರದ ಮುಂಬೈ(Mumbai) ನಗರದಲ್ಲಿ ಓಮಿಕ್ರಾನ್ ಕೇಸ್ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ(Maharastra) ಪತ್ತೆಯಾದ ಮೊದಲ ಓಮಿಕ್ರಾನ್ ಕೇಸ್ ಆಗಿದೆ. ಒಟ್ಟಾರೆ ಭಾರತದಲ್ಲಿ ಖಚಿತಗೊಂಡಿರುವ ನಾಲ್ಕನೇ ಓಮಿಕ್ರಾನ್ ಕೇಸ್ ಇದಾಗಿದೆ. ಸೌತ್ಆಫ್ರಿಕಾದಿಂದ(South Africa) ಮುಂಬೈಗೆ ಆಗಮಿಸಿದ 33 ವರ್ಷದ ವ್ಯಕ್ತಿಗೆ ಓಮಿಕ್ರಾನ್ ರೂಪಾಂತರಿ ವೈರಸ್ ತಗುಲಿರುವುದು ದೃಢಪಟ್ಟಿದೆ. ಸೌತ್ ಆಫ್ರಿಕಾದ ಕೇಪ್‌ಟೌನ್‌ನಿಂದ ದುಬೈ ಮಾರ್ಗವಾಗಿ ದೆಹಲಿಗೆ ಬಂದಳಿದ 33ರ ಹರೆಯದ ವ್ಯಕ್ತಿ, ದೆಹಲಿಯಿಂದ ಮುಂಬೈ ತಲುಪಿದ್ದಾರೆ. ಓಮಿಕ್ರಾನ್ ಪತ್ತೆಯಾದ ಹಿನ್ನಲೆಯಲ್ಲಿ ವ್ಯಕ್ತಿ ಮನೆ ಹಾಗೂ ಸುತ್ತಮುತ್ತ ಕಂಟೈನ್ಮೆಂಟ್ ಜೋನ್ ನಿರ್ಬಂಧ ವಿಧಿಸಲಾಗಿದೆ.