ನವದೆಹಲಿ(ಮೇ.11): ದೇಶದ ಒಟ್ಟು ಕೊರೋನಾ ಸೋಂಕಿತರಲ್ಲಿ ಶೇ.50ರಷ್ಟುಮಂದಿ ಕೇವಲ ಐದು ನಗರಗಳಿಗೆ ಸೇರಿದವರಾಗಿದ್ದಾರೆ ಎಂಬ ತೀವ್ರ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ. ದೆಹಲಿ, ಪುಣೆ, ಮುಂಬೈ, ಅಹಮದಾಬಾದ್‌ ಹಾಗೂ ಚೆನ್ನೈನಲ್ಲೇ ದೇಶದ ಅರ್ಧದಷ್ಟುಸೋಂಕಿತರು ಇದ್ದಾರೆ. ಒಟ್ಟಾರೆ ಈ ಐದು ನಗರ/ಜಿಲ್ಲೆ ಸೇರಿ ದೇಶದ 15 ಜಿಲ್ಲೆಗಳಲ್ಲೇ ಶೇ.64ರಷ್ಟುವೈರಸ್‌ಪೀಡಿತರಿದ್ದಾರೆ ಎಂದು ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ತಿಳಿಸಿದ್ದಾರೆ.

ದೇಶದ ಸೋಂಕಿತರ ಸಂಖ್ಯೆಯಲ್ಲಿ ಮುಂಬೈವೊಂದರಲ್ಲೇ ಶೇ.17ರಷ್ಟುಮಂದಿ ಇದ್ದರೆ, ದೆಹಲಿಯಲ್ಲಿ ಶೇ.11.3ರಷ್ಟಿದ್ದಾರೆ. ಅಹಮದಾಬಾದ್‌ನಲ್ಲಿ ಶೇ.9.8, ಚೆನ್ನೈನಲ್ಲಿ ಶೇ.5 ಹಾಗೂ ಪುಣೆಯಲ್ಲಿ ಶೇ.3.4ರಷ್ಟುಸೋಂಕಿತರು ಇರುವ ವಿಷಯ ನೀತಿ ಆಯೋಗ ನಡೆಸಿದ ವಿಶ್ಲೇಷಣೆಯಿಂದ ಗೊತ್ತಾಗಿದೆ.

ಐದು ನಗರಗಳ ಪೈಕಿ ಚೆನ್ನೈನಲ್ಲಿ ಚೇತರಿಕೆ ಪ್ರಮಾಣ (ಶೇ.12.3) ಕಡಿಮೆ ಇದ್ದರೆ, ದೆಹಲಿಯಲ್ಲಿ (ಶೇ.32.3) ಅತ್ಯಧಿಕವಾಗಿದೆ. ಅಹಮದಾಬಾದ್‌ನಲ್ಲಿ ಸಾವಿನ ಪ್ರಮಾಣ (ಶೇ.6.4) ಅಧಿಕವಾಗಿದ್ದರೆ, ದೆಹಲಿಯಲ್ಲಿ (ಶೇ.1.1) ಕಡಿಮೆ ಇದೆ ಎಂದು ನೀತಿ ಆಯೋಗ ಹೇಳಿದೆ.

ಗುಜರಾತ್‌ನಲ್ಲಿ ಪತ್ತೆಯಾಗಿರುವ ಒಟ್ಟು ಕೊರೋನಾಪೀಡಿತರ ಸಂಖ್ಯೆಯಲ್ಲಿ ಅಹಮದಾಬಾದ್‌ ಪಾಲೇ ಶೇ.71.5ರಷ್ಟಿದೆ. ತಮಿಳುನಾಡಿನ ಸೋಂಕಿತರ ಸಂಖ್ಯೆಗೆ ಚೆನ್ನೈ ಪಾಲು ಶೇ.50ರಷ್ಟಿದೆ. ಮಹಾರಾಷ್ಟ್ರಕ್ಕೆ ಮುಂಬೈ ಪಾಲು ಶೇ.61.3ರಷ್ಟಿದೆ ಎಂದು ತಿಳಿಸಿದೆ.

ಮುಂಬೈ: ಶೇ.17

ದೆಹಲಿ: ಶೇ.11.3

ಅಹಮದಾಬಾದ್‌: ಶೇ9.8

ಚೆನ್ನೈ ಶೇ.5.0

ಪುಣೆ: ಶೇ.3.4