ನವದೆಹಲಿ[ಮಾ.14]: ಹಣಕಾಸು ಸಂಕಷ್ಟದಿಂದ ಸಾಲದ ಸುಳಿಗೆ ಸಿಲುಕಿರುವ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ರಕ್ಷಣೆಗಾಗಿ ದೇಶಾದ್ಯಂತ ಟೋಲ್‌ ಶುಲ್ಕ ಹೆಚ್ಚಳ ಹಾಗೂ ಕೆಲ ಯೋಜನೆಗಳನ್ನು ಮುಂದೂಡುವಂತೆ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯಕ್ಕೆ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.ಹಾಲಿ ಟೋಲ್‌ ದರದಿಂದ ಹೆದ್ದಾರಿ ಪ್ರಾಧಿಕಾರದ ನಿರ್ವಹಣೆ ಕಷ್ಟಸಾಧ್ಯ ಎಂದು ಅದು ಅಭಿಪ್ರಾಯ ಪಟ್ಟಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಸ್ತುತ ಆರ್ಥಿಕ ಸ್ಥಿತಿ ಹೆಚ್ಚು ದಿನಗಳ ಕಾಲ ಸುಸ್ಥಿರವಾಗಿರುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹೀಗಾಗಿ, ಪ್ರಾಧಿಕಾರದ ಆರ್ಥಿಕ ದುಸ್ಥಿತಿಯು ಭವಿಷ್ಯದಲ್ಲಿ ರಸ್ತೆ ಮೂಲಭೂತ ಸೌಕರ್ಯಗಳ ವಲಯದಲ್ಲಿ ಭಾರೀ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸ್ಥಾಯಿ ಸಮಿತಿ ಆತಂಕ ವ್ಯಕ್ತಪಡಿಸಿದೆ.

ಇಂದಿನಿಂದ ಸಂಸತ್‌ ಅಧಿವೇಶನ; ದಿಲ್ಲಿ ಹಿಂಸೆ ಬಿರುಗಾಳಿ ಸಾಧ್ಯತೆ

ಮತ್ತೊಂದೆಡೆ, ಹಾಲಿ ವಾರ್ಷಿಕ ಬಜೆಟ್‌ನಲ್ಲಿ ರಸ್ತೆ ಮತ್ತು ಸಾರಿಗೆ ಇಲಾಖೆಗೆ ಮೀಸಲಿಟ್ಟಹಣಕ್ಕಿಂತಲೂ ಪ್ರಾಧಿಕಾರದ ಸಾಲ ಮೊತ್ತವೇ ದ್ವಿಗುಣವಾಗಿದೆ. 2021-22ರ ಅವಧಿಯಲ್ಲಿ ರಸ್ತೆ ಪ್ರಾಧಿಕಾರದ ಸಾಲದ ಮೊತ್ತವು 34,846 ಕೋಟಿ ರು.ಗೆ ಏರಬಹುದು ಎಂಬ ಲೆಕ್ಕಾಚಾರವಿದ್ದು, ಮುಂದಿನ ವರ್ಷಗಳಲ್ಲಿ ಮತ್ತಷ್ಟುಹೆಚ್ಚಾಗಲಿದೆ. ಹೀಗಾಗಿ, ಪ್ರಾಧಿಕಾರದ ಆರ್ಥಿಕ ಸಮಸ್ಯೆ ಪರಿಹಾರಕ್ಕಾಗಿ ಟೋಲ್‌ ದರ ಹೆಚ್ಚಳ ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂದು ಸಮತಿ ಪ್ರತಿಪಾದಿಸಿದೆ.