ಚೆನ್ನೈ(ಅ.08): ಜನವರಿಯಲ್ಲಿ ಜೈಲಿನಿಂದ ಹೊರಬಂದು ತಮಿಳುನಾಡು ರಾಜಕಾರಣದಲ್ಲಿ ‘ಕಿಂಗ್‌ಮೇಕರ್‌’ ಆಗುವ ತವಕದಲ್ಲಿರುವ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಆಪ್ತ ಸ್ನೇಹಿತೆ ಶಶಿಕಲಾ ನಟರಾಜನ್‌ಗೆ ಭಾರಿ ಹಿನ್ನಡೆಯಾಗಿದೆ. ಶಶಿಕಲಾ, ಅವರ ಬಂಧುಗಳಾದ ಇಳವರಸಿ ಹಾಗೂ ವಿ.ಎನ್‌. ಸುಧಾಕರನ್‌ಗೆ ಸೇರಿದ ಬರೋಬ್ಬರಿ 2000 ಕೋಟಿ ರು. ಮೌಲ್ಯದ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ.

ಸದ್ಯ ಈ ಮೂವರೂ ಬೆಂಗಳೂರು ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯ ಬೇನಾಮಿ ವ್ಯವಹಾರ ನಿರ್ಬಂಧ ವಿಭಾಗ ಆಸ್ತಿಗಳನ್ನು ಜಪ್ತಿ ಮಾಡಿದೆ. ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಗಳು ತಮಿಳುನಾಡಿನ ಸಿರುಥವೂರು ಹಾಗೂ ಕೊಡನಾಡುಗಳಲ್ಲಿ ಇವೆ ಎಂದು ಆದಾಯ ತೆರಿಗೆ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗಷ್ಟೇ ಚೆನ್ನೈನ ಸುತ್ತಮುತ್ತ ಶಶಿಕಲಾ ಹೊಂದಿದ್ದ 300 ಕೋಟಿ ರು. ಆಸ್ತಿಯನ್ನು ತೆರಿಗೆ ಇಲಾಖೆ ಜಪ್ತಿ ಮಾಡಿತ್ತು. ಜಯಲಲಿತಾ ನಿವಾಸ ವೇದ ನಿಲಯಂ ಎದುರಿಗಿನ ನಿವೇಶನವೂ ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿಯಲ್ಲಿ ಸೇರಿತ್ತು.

ಶಶಿಕಲಾ, ಇಳವರಸಿ ಹಾಗೂ ಸುಧಾಕರನ್‌ ಅವರು ಅಕ್ರಮ ಆಸ್ತಿ ಗಳಿಕೆ ಸಂಬಂಧ 4 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು, 2017ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಜನವರಿಯಲ್ಲಿ ಅವರ ಬಿಡುಗಡೆಯಾಗುವ ನಿರೀಕ್ಷೆ ಇದೆ.