ನವದೆಹಲಿ[ಜ.23]: ಕರ್ನಾಟಕದ ಮೂವರು ಸೇರಿದಂತೆ 49 ವಿದ್ಯಾರ್ಥಿಗಳಿಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಬುಧವಾರ ಬಾಲ ಶಕ್ತಿ ಪುರಸ್ಕಾರ ಪ್ರದಾನ ಮಾಡಿದ್ದಾರೆ.

ದಕ್ಷಿಣ ಕನ್ನಡದ ಬೆಳ್ತಂಗಡಿಯ ಬಾಲಕಿ ಮೂರ್ಜೆ ಸುನಿತಾ ಪ್ರಭು ಶೈಕ್ಷಣಿಕ ವಿಭಾಗದಲ್ಲಿ, ಬೆಂಗಳೂರಿನ ಪ್ರಗುನ್‌ ಪುದ್ಕೋಳಿ ಕಲೆ ಮತ್ತು ಸಂಸ್ಕೃತಿ, ಬೆಂಗಳೂರಿನ ಯಶ್‌ ಆರಾಧ್ಯಾ ಎಸ್‌. ಕ್ರೀಡಾ ವಿಭಾಗದಲ್ಲಿ ಪ್ರಧಾನ ಮಂತ್ರಿ ಬಾಲ ಶಕ್ತಿ ಪುರಸ್ಕಾರ ಸ್ವೀಕರಿಸಿದ್ದಾರೆ.

ಸಾಮಾಜಿಕ ಸೇವೆ, ನಾವಿನ್ಯತೆ, ಶೈಕ್ಷಣಿಕ, ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮತ್ತು ಶೌರ್ಯ ಸಾಹಸ ಮೆರೆದ 5ರಿಂದ 18 ವರ್ಷದ ಒಳಗಿನ ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ 1 ಲಕ್ಷ ರು. ಬಹುಮಾನ ಮತ್ತು ಪಾರಿತೋಷಕವನ್ನು ಒಳಗೊಂಡಿದೆ.

ಇಬ್ಬರು ದರೋಡೆಕೋರರಿಂದ ರಷ್ಯಾದ ಪ್ರವಾಸಿಯೊಬ್ಬರನ್ನು ರಕ್ಷಿಸಿದ ಹರ್ಯಾಣದ ಇಶಾನ್‌ ಶರ್ಮಾ, ವಿಶ್ವದೆಲ್ಲೆಡೆ 50ಕ್ಕೂ ಹೆಚ್ಚು ಜಾದೂ ಪ್ರದರ್ಶನ ನೀಡಿದ ದಶ್‌ರ್‍ ಮಲಾನಿ, ತಬಲಾ ವಾದನದಲ್ಲಿ ಹೆಸರು ಮಾಡಿದ ಮನೋಜ್‌ ಕುಮಾರ್‌ ಲೋಹಾರ್‌, ಭಾರತದ ಅತಿ ಕಿರಿಯ ಪಿಯಾನೊ ವಾದಕ ಗೌರಿ ಮಿಶ್ರಾ ಬಾಲ ಶಕ್ತಿ ಪುರಸ್ಕಾರಕ್ಕೆ ಭಾಜನರಾದವರಲ್ಲಿ ಪ್ರಮುಖರಾಗಿದ್ದಾರೆ.

ಕರ್ನಾಟಕದ ಪ್ರಶಸ್ತಿ ಪುರಸ್ಕೃತರು

ಪ್ರಗುನ್: ಬೆಂಗಳೂರಿನ ಶಿಶುಗೃಹ ಮಾಂಟೆಸ್ಸರಿ ಮತ್ತು ಹೈಸ್ಕೂಲ್‌ನ 8ನೇ ತರಗತಿ ವಿದ್ಯಾರ್ಥಿಯಾದ ಪ್ರಗುನ್‌ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ತೋರಿದ ಅಸಾಧಾರಣ ಸಾಧನೆಗೆ ಈ ಪ್ರಶಸ್ತಿ ದೊರೆತಿದೆ. ರಾಜ್‌ಕೋಟ್‌ನಲ್ಲಿ ನಡೆದ ಐಎನ್‌ಎಸ್‌ಇಎಫ್‌ ರಾಷ್ಟ್ರೀಯ ಟೆಕ್‌ ಮೇಳ 2019ದಲ್ಲಿ ಪಾಲ್ಗೊಂಡು ಪದಕ ಪಡೆದುಕೊಂಡಿದ್ದ ಪ್ರಗುನ್‌, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಯಶ್‌ ಆರಾಧ್ಯ: ಬೆಂಗಳೂರಿನ ಯಶ್‌ ಆರಾಧ್ಯ (17), ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾದ ಭಾರತದ ಮೊದಲ ಮೋಟಾರ್‌ ಸ್ಪೋಟ್ಸ್‌ರ್‍ ಪಟು. 9ನೇ ವಯಸ್ಸಿನಿಂದಲೇ ರೇಸಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಯಶ್‌ ಈವರೆಗೆ 13 ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. 2017ರಲ್ಲಿ ಪೋರ್ಚುಗಲ್‌ನಲ್ಲಿ ನಡೆದ ರೋಟಾಕ್ಸ್‌ ವಿಶ್ವ ಫೈನಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಮೂರ್ಜೆ ಸುನಿತಾ ಪ್ರಭು: ಮೂರ್ಜೆ ಸುನಿತಾ ಪ್ರಭು ಬೆಳ್ತಂಗಡಿಯವರು. 2019ರಲ್ಲಿ ಅಮೆರಿಕದ ಫೀನಿಕ್ಸ್‌ನಲ್ಲಿ ನಡೆದಿದ್ದ 80 ನೇ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಳು. ಪರಿಸರ ಸ್ನೇಹಿ ಸೊಳ್ಳೆ ನಿವಾರಕ ಉಡುಪು ಸಂಶೋಧಿಸಿ ಗಮನಸೆಳೆದಿದ್ದಳು. ಪ್ರಸಕ್ತ ಮಂಗಳೂರಿನ ಸಿಎಫ್‌ಎಎಲ್‌ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಹಲವು ವಿಜ್ಞಾನ, ತಂತ್ರಜ್ಞಾನ ಸಂಬಂಧಿತ ಪ್ರದರ್ಶನಗಳಲ್ಲಿ ಪಾಲ್ಗೊಂಡಿದ್ದಾಳೆ. ಜೊತೆಗೆ ಈಕೆ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಕಲಾವಿದೆಯೂ ಹೌದು.