ನವದೆಹಲಿ[ಡಿ.16]: 2012ರ ದೆಹಲಿಯ ನಿರ್ಭಯಾ ಗ್ಯಾಂಗ್‌ರೇಪ್‌ ಪ್ರಕರಣದ ಬಳಿಕ ಮಹಿಳೆಯರ ಸುರಕ್ಷತೆಗಾಗಿ 2013ರಲ್ಲಿ ಆಗಿನ ಯುಪಿಎ ಸರ್ಕಾರ ಸ್ಥಾಪನೆ ಮಾಡಿದ್ದ ‘ನಿರ್ಭಯಾ ನಿಧಿ’ಯಲಿ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳು ಒಂದೇ ಒಂದು ರುಪಾಯಿಯನ್ನೂ ಬಳಕೆ ಮಾಡಿಲ್ಲ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇನ್ನು ಶೇ.7ರಷ್ಟುಮಾತ್ರ ನಿಧಿ ಬಳಕೆ ಮಾಡಿಕೊಂಡ ಕರ್ನಾಟಕವೂ ನಿರ್ಭಯಾ ನಿಧಿ ಬಳಕೆಯಲ್ಲಿ ತೀರಾ ಹಿಂದೆ ಬಿದ್ದಿದೆ. ನಿರ್ಭಯಾ ನಿಧಿಯಡಿ ಕರ್ನಾಟಕಕ್ಕೆ 191 ಕೋಟಿ ರು. ಮೀಸಲಿಡಲಾಗಿತ್ತು. ಈ ಪೈಕಿ ಕೇವಲ 13.62 ಕೋಟಿ ರು. ಮಾತ್ರವೇ ಸದ್ಬಳಕೆ ಮಾಡಿಕೊಂಡಿತ್ತು.

ನಿರ್ಭಯಾ ನಿಧಿಗೆ ಕೇಂದ್ರ ಸರ್ಕಾರ ಒಟ್ಟಾರೆ 1649 ಕೋಟಿ ರು. ಬಿಡುಗಡೆ ಮಾಡಿದೆ. ಈ ಪೈಕಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೇವಲ 147 ಕೋಟಿ ರು. ಮಾತ್ರ ಪಡೆದುಕೊಂಡಿವೆ ಎಂದು ಸಂಸತ್ತಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರೇ ಮಾಹಿತಿ ನೀಡಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಿಗೆ ನಿರ್ಭಯಾ ನಿಧಿಯಡಿ ಅತಿಹೆಚ್ಚು ಅನುದಾನ ಮೀಸಲಿಡಲಾಗಿದೆ. ಆದರೆ, ತನಗೆ ಮೀಸಲಾಗಿದ್ದ 190.68 ಕೋಟಿ ರು.ನಲ್ಲಿ ತಮಿಳುನಾಡು ಕೇವಲ 6 ಕೋಟಿ ರು. ಮಾತ್ರ ಸದ್ಬಳಕೆ ಮಾಡಿಕೊಂಡಿದೆ. ಇನ್ನು ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಸಿಕ್ಕಿಂ, ತ್ರಿಪುರ, ದಿಯು ಮತ್ತು ದಮನ್‌ಗಳು ಈ ನಿಧಿಯ ನಯಾ ಪೈಸೆಯನ್ನು ಸಹ ಸದ್ಬಳಕೆ ಮಾಡಿಕೊಂಡಿಲ್ಲ. ಅಲ್ಲದೆ, ದೆಹಲಿಗೆ ಮೀಸಲಾಗಿದ್ದ 390 ಕೋಟಿ ರು. ಪೈಕಿ, ಕೇವಲ ಶೇ.5ರಷ್ಟುನಿಧಿಯನ್ನು ಮಾತ್ರವೇ ಕೇಜ್ರಿವಾಲ್‌ ಸರ್ಕಾರ ಬಳಸಿಕೊಂಡಿದೆ ಎಂದು ಸರ್ಕಾರದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಂದೆಡೆ, ಈ ನಿಧಿ ಸದ್ಬಳಕೆಗೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ. ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ನಿರ್ಧರಿಸಲಾಗಿದ್ದ ಸಿಸಿ ಕ್ಯಾಮೆರಾಗಳು ಮತ್ತು ಪ್ಯಾನಿಕ್‌ ಬಟನ್‌ಗಳ ಅಳವಡಿಕೆಗೆ ಬಳಸಿಕೊಳ್ಳುತ್ತೇವೆ ಎಂಬ ತಮ್ಮ ಕೋರಿಕೆಯನ್ನು ಕೇಂದ್ರ ಸರ್ಕಾರವೇ ನಿರಾಕರಿಸಿತ್ತು. ಇದರಿಂದಾಗಿ ಈ ನಿಧಿಯ ಬಳಕೆ ಸಾಧ್ಯವಾಗಲಿಲ್ಲ ಎಂದು ಕೇಂದ್ರದ ವಿರುದ್ಧ ದೆಹಲಿ ಸಿಎಂ ಕೇಜ್ರಿವಾಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ನಿಧಿ ಬಳಕೆ?

ರಾಜ್ಯಗಳು ಹಂಚಿಕೆಯಾದ ಮೊತ್ತ ಸದ್ಬಳಕೆ ಆದ ಮೊತ್ತ

ಕರ್ನಾಟಕ 191 ಕೋಟಿ ರು. 13.62 ಕೋಟಿ ರು.

ದೆಹಲಿ 390 ಕೋಟಿ ರು. 19.41 ಕೋಟಿ ರು.

ತೆಲಂಗಾಣ 103 ಕೋಟಿ ರು. 4 ಕೋಟಿ ರು.

ತಮಿಳುನಾಡು 190.68 ಕೋಟಿ ರು. 6 ಕೋಟಿ ರು.