* ಮೋದಿ ಸೂಚನೆ ಮೇಲೆ ನಿಲುವು ಬದಲಿಸಿದ ಸರ್ಕಾರ* ದೇಶದ್ರೋಹ ಕಾನೂನು ಮರುಪರಿಶೀಲನೆ: ಕೇಂದ್ರ ದಿಢೀರ್‌ ಉಲ್ಟಾ* ಸುಪ್ರೀಂಕೋರ್ಟ್‌ಗೆ ಮಾಹಿತಿ, ಸ್ವಲ್ಪ ಕಾಯಲು ಮನವಿ

ನವದೆಹಲಿ(ಮೇ.10): ದೇಶದ್ರೋಹ ಕಾಯ್ದೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಶನಿವಾರದವರೆಗೂ ವಾದ ಮಂಡಿಸಿ ಆ ಕಾಯ್ದೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ ಈಗ ದಿಢೀರ್‌ ತನ್ನ ನಿಲುವು ಬದಲಿಸಿಕೊಂಡಿದೆ. ಕಾಯ್ದೆಯ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ ಐಪಿಸಿ ಸೆಕ್ಷನ್‌ 124 ಎ ಅನ್ನು ಮರುಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಕ್ಷಮ ವೇದಿಕೆಯೊಂದು ನಿಷ್ಕರ್ಷೆ ನಡೆಸಲಿದೆ. ಅಲ್ಲಿವರೆಗೂ ಸುಪ್ರೀಂಕೋರ್ಚ್‌ ಕಾಯಬೇಕು. ದೇಶದ್ರೋಹ ಕಾಯ್ದೆಯ ಸಂವಿಧಾನಿಕ ಸಿಂಧುತ್ವ ಪರಿಶೀಲನೆಗೆ ಸಮಯ ವಿನಿಯೋಗಿಸಬಾರದು ಎಂದು ಪ್ರಮಾಣಪತ್ರವೊಂದನ್ನು ಕೇಂದ್ರ ಗೃಹ ಸಚಿವಾಲಯ ಸಲ್ಲಿಕೆ ಮಾಡಿದೆ.

ದೇಶದ್ರೋಹ ಕಾಯ್ದೆ ವ್ಯಾಪಕವಾಗಿ ದುರ್ಬಳಕೆಯಾಗುತ್ತಿದೆ ಎಂದು ಎಡಿಟ​ರ್‍ಸ್ ಗಿಲ್ಡ್‌ ಆಫ್‌ ಇಂಡಿಯಾ, ತೃಣಮೂಲ ಕಾಂಗ್ರೆಸ್‌ ಸಂಸದೆ ಮಹುವಾ ಮೊಯಿತ್ರಾ ಮತ್ತಿತರರು ಸುಪ್ರೀಂಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಮಹಾತ್ಮ ಗಾಂಧಿ ಅವರಂತಹ ಸ್ವಾತಂತ್ರ್ಯದ ಹೆಗ್ಗುರುತುಗಳ ಧ್ವನಿಯನ್ನೇ ಅಡಗಿಸಲು ಬ್ರಿಟಿಷರು ಈ ಕಾಯ್ದೆ ಬಳಸಿಕೊಂಡಿದ್ದರು. ಅಂತಹ ಕಾಯ್ದೆಯನ್ನೇಕೆಗೆ ಸರ್ಕಾರ ರದ್ದುಗೊಳಿಸುತ್ತಿಲ್ಲ ಎಂದು ಕಳೆದ ಜುಲೈನಲ್ಲಿ ಸುಪ್ರೀಂಕೋರ್ಚ್‌ ಪ್ರಶ್ನಿಸಿತ್ತು.

ಈ ನಡುವೆ, ಕಾಯ್ದೆಯನ್ನು ಎತ್ತಿಹಿಡಿದ 1962ರ ಸುಪ್ರೀಂಕೋರ್ಚ್‌ನ ತೀರ್ಪು ಮರುಪರಿಶೀಲಿಸಬೇಕೆಂಬ ಕೋರಿಕೆಯನ್ನು ವಿಸ್ತೃತ ಪೀಠಕ್ಕೆ ಹಸ್ತಾಂತರಿಸಬೇಕೆ ಎಂಬ ಕುರಿತು ಮೇ 10ರಿಂದ ವಿಚಾರಣೆ ಆರಂಭಿಸುವುದಾಗಿ ಮೇ 5ರಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಹಾಗೂ ಹಿಮಾ ಕೊಹ್ಲಿ ಅವರು ಹೇಳಿದ್ದರು. ಅದಕ್ಕೆ ಒಂದು ದಿನ ಮುನ್ನ ಕಾಯ್ದೆ ಮರುಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ.

1962ರ ತೀರ್ಪು ಆಯಾ ಕಾಲಕ್ಕೆ ಅನುಗುಣವಾಗಿ ಪರೀಕ್ಷೆಗೆ ಒಳಪಟ್ಟಿದೆ. ಅದನ್ನು ಮರು ವಿಮರ್ಶಿಸಬೇಕಾದ ಅಗತ್ಯವಿಲ್ಲ. ದೇಶದ್ರೋಹ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ಕಾಯ್ದೆ ರದ್ದುಗೊಳಿಸಲು ಅದು ಆಧಾರವಾಗುವುದಿಲ್ಲ. ಬದಲಾಗಿ, ದುರ್ಬಳಕೆ ತಡೆಯಲು ಪರಿಹಾರ ಹುಡುಕಬೇಕು ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಶನಿವಾರದ ವಿಚಾರಣೆ ವೇಳೆ ಹೇಳಿದ್ದರು.

ಏನಿದು ವಿವಾದ?

- ದೇಶವನ್ನು ನಿಂದಿಸುವವರ ವಿರುದ್ಧ ಪ್ರಯೋಗಿಸುವ ಕಾಯ್ದೆ

- ಸೆಕ್ಷನ್‌ 124 ಎ ಅಡಿ ವಾರೆಂಟ್‌ ಇಲ್ಲದೆ ಬಂಧಿಸುವ ಅಧಿಕಾರ

- ಸರ್ಕಾರದಿಂದ ಇದು ದುರ್ಬಳಕೆಯಾಗುತ್ತಿದೆ ಎಂದು ದೂರು

- ಬ್ರಿಟಿಷ್‌ ಕಾಲದ ಈ ಕಾಯ್ದೆ ಬೇಕೆ ಎಂದು ಕೇಳಿದ್ದ ‘ಸುಪ್ರೀಂ’