ಸೇನೆ ಹಿಂಪಡೆತ ಚೀನಾಕ್ಕೆ ಭಾರತ ಶರಣಾಗತಿ ಸಂಕೇತ: ಆ್ಯಂಟನಿ| ಈ ಬಜೆಟ್‌ನಲ್ಲಿ ರಕ್ಷಣಾ ವಿಭಾಗಕ್ಕೆ ಹೆಚ್ಚಿನ ಅನುದಾನವೇ ಇಲ್ಲ

ನವದೆಹಲಿ(ಫೆ.15): ಪ್ಯಾಂಗಾಂಗ್‌ ಸರೋವರದಲ್ಲಿ ಚೀನಾ ಮತ್ತು ಭಾರತದ ಸೇನಾಪಡೆಗಳ ಹಿಂಪಡೆತದಿಂದ ಭಾರತದ ಯಾವುದೇ ಭಾಗವು ಚೀನಾಕ್ಕೆ ಬಿಟ್ಟುಕೊಟ್ಟಿಲ್ಲ ಎಂಬ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ ಬೆನ್ನಲ್ಲೇ, ‘ಪೂರ್ವ ಲಡಾಖ್‌ನ ಗಲ್ವಾನ್‌ ಮತ್ತು ಪ್ಯಾಂಗಾಂಗ್‌ ತ್ಸೋ ಸರೋವರದಲ್ಲಿ ಬೀಡುಬಿಟ್ಟಿದ್ದ ಸೇನಾಪಡೆಯ ಹಿಂಪಡೆತ ಮತ್ತು ಬಫರ್‌ ವಲಯ ಸೃಷ್ಟಿಯು ಭಾರತದ ಶರಣಾಗತಿಯ ಸಂಕೇತ’ ಎಂದು ಮಾಜಿ ರಕ್ಷಣಾ ಸಚಿವ ಎ.ಕೆ ಆ್ಯಂಟನಿ ದೂರಿದ್ದಾರೆ.

ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆ್ಯಂಟನಿ ಅವರು, ‘ಪಾಕಿಸ್ತಾನ ಮತ್ತು ಚೀನಾ ರಾಷ್ಟ್ರಗಳಿಂದ ಗಡಿಯಲ್ಲಿ ಯುದ್ಧ ಪರಿಸ್ಥಿತಿ ಸೇರಿದಂತೆ ಭಾರತದ ಗಡಿಯಲ್ಲಿ ಹಲವು ಸವಾಲುಗಳು ಎದುರಾಗಿವೆ. ಆದರೆ, ಈ ಬಾರಿಯ 2021-22ರ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡದಿರುವುದು ಅಸಮಂಜಸ ಮತ್ತು ದೇಶಕ್ಕೆ ಎಸಗಲಾದ ದ್ರೋಹ’ ಎಂದು ಕಿರಿಕಾರಿದರು.

ಪಾಕಿಸ್ತಾನಕ್ಕೆ ಮಾಹಿತಿ ಸೋರಿಕೆ, DRDO ಫೋಟೋಗ್ರಾಫರ್‌ಗೆ ಜೀವಾವಧಿ ಶಿಕ್ಷೆ !

ಗಲ್ವಾನ್‌ ಕಣಿವೆ ಪ್ರದೇಶವು ಭಾರತದ ವ್ಯಾಪ್ತಿಯಲ್ಲೇ ಇದ್ದು, ಅದು 1962ರಲ್ಲೂ ಸಹ ಚೀನಾ ಮತ್ತು ಭಾರತದ ಬಿಕ್ಕಟ್ಟಿನ ಪ್ರದೇಶವಾಗಿರಲಿಲ್ಲ. ಸೇನೆಯ ಹಿಂಪಡೆತದ ಮೂಲಕ ಬಫರ್‌ ವಲಯ ಸೃಷ್ಟಿಸುವುದು ಎಂದರೆ ಶರಣಾಗತಿಯ ಸಂಕೇತ. ಆದರೆ ಕೇಂದ್ರ ಸರ್ಕಾರ ಮಾತ್ರ ಇದರ ಮಹತ್ವವನ್ನು ಅರಿಯುತ್ತಿಲ್ಲ’ ಎಂದರು.

ಗಡಿಭಾಗಗಳಲ್ಲಿ ಒಂದೆಡೆ ಪಾಕಿಸ್ತಾನ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದೆ. ಮತ್ತೊಂದೆಡೆ ಚೀನಾ ತನ್ನ ಸೇನೆ ಮೂಲಕ ಯುದ್ಧದ ವಾತಾವರಣ ನಿರ್ಮಿಸುತ್ತಿದೆ. ಇಂಥ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೇಶದ ಭದ್ರತೆಗೆ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಚೀನಾ ಯಾವಾಗ ಬೇಕಾದರೂ ಪಾಕಿಸ್ತಾನಕ್ಕೆ ನೆರವು ನೀಡುವ ಮೂಲಕ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ತನ್ನ ಆಟ ಶುರು ಮಾಡಬಹುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಸಿದರು.

ಏರೋ ಇಂಡಿಯಾಕ್ಕೆ ತೆರೆ, ಹರಿದು ಬಂದ 2464 ಕೋಟಿ ರೂ.

ಗಡಿಯಿಂದ ಸೇನೆ ಹಿಂಪಡೆತ ಸೇರಿದಂತೆ ಭದ್ರತೆಗೆ ಸಂಬಂಧಿಸಿದ ಇನ್ನಿತರ ಮಹತ್ವದ ವಿಚಾರಗಳ ಬಗ್ಗೆ ಸರ್ಕಾರವು ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಕೇಂದ್ರವನ್ನು ಒತ್ತಾಯಿಸಿದರು.