* ಕೋವಿಡ್‌ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ ರೂ.50,000 ಪರಿಹಾರ* ಸಂತ್ರಸ್ತ ಕುಟುಂಬಕ್ಕೆ ಮಾಸಿಕ 2500 ರು. ಪಿಂಚಣಿ* ಅನಾಥ ಮಕ್ಕಳ ಶಿಕ್ಷಣ ಜವಾಬ್ದಾರಿ ವಹಿಸಿಕೊಳ್ಳುವ ಶಪಥ

ನವದೆಹಲಿ(ಮೇ.20): ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್‌ಗೆ ಭಾರೀ ಪ್ರಮಾಣದ ಜನ ಸಾವಿಗೀಡಾಗುತ್ತಿರುವ ಬೆನ್ನಲ್ಲೇ, ಈ ವ್ಯಾಧಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ರು. ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಪ್ರಕಟಿಸಿದ್ದಾರೆ.

ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್‌ ಅವರು, 50 ಸಾವಿರ ರು. ಪರಿಹಾರದ ಜೊತೆಗೆ ಆ ವ್ಯಕ್ತಿ ದುಡಿಯುವ ವ್ಯಕ್ತಿಯಾಗಿದ್ದರೆ ಅವರ ಕುಟುಂಬಕ್ಕೆ ಮಾಸಿಕ 2500 ರು. ಪಿಂಚಣಿ ನೀಡಲಾಗುತ್ತದೆ. ಕೊರೋನಾ ವೈರಸ್‌ನಿಂದ ತಂದೆ-ತಾಯಿ ಸೇರಿ ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳು 25 ವರ್ಷ ಆಗುವವರಿಗೆ ಮಾಸಿಕ 2500 ರು. ಸಹಾಯ ಧನ ನೀಡಲಾಗುತ್ತದೆ.

ಅಲ್ಲದೆ ಆ ಮಕ್ಕಳ ಪೂರ್ತಿ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಈ ಎಲ್ಲಾ ನಿರ್ಣಯಗಳಿಗೆ ದೆಹಲಿ ಕ್ಯಾಬಿನೆಟ್‌ನಿಂದ ಅನುಮೋದನೆ ಪಡೆದು ಬಳಿಕ ಅನುಷ್ಠಾನಕ್ಕೆ ತರಲಾಗುತ್ತದೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಮತ್ತೊಂದೆಡೆ ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಬಡ ಕುಟುಂಬಗಳಿಗೆ ಮಾಸಿಕ 72 ಲಕ್ಷ ಪಡಿತರ ಚೀಟಿದಾರರು ಮತ್ತು ಬಡ ಕುಟುಂಬಗಳಿಗೆ ಮಾಸಿಕ 10 ಕೇಜಿ ಪಡಿತರವನ್ನು ವಿತರಿಸಲಾಗುತ್ತದೆ ಎಂದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona