ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ರಸ್ತೆ ಬದಿಯ ಪಾನಿಪುರಿ ತಿಂದ ಒಂದೇ ಕುಟುಂಬದ ಏಳು ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಇವರಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಪಾನಿಪುರಿ ಅಂಗಡಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದಾರೆ.

ಪಾನಿಪುರಿ ಅಂದ್ರೆ ಸಾಕು ಅದೆಷ್ಟೋ ಮಂದಿಯ ಬಾಯಲ್ಲಿ ನೀರು ಬರುತ್ತೆ. ಸಂಜೆ ಏನಾದರೂ ಸರಿ ಒಂದು ರೌಂಡ್‌ ಪಾನಿ ಇಳಿಸಿದ ಮೇಲೆಯೇ ಸಮಾಧಾನ ಅನ್ನೋರು ಇದ್ದಾರೆ. ಇದೀಗ ಇದೇ ಪಾನಿಪುರಿ ಪ್ರಿಯರಿಗೆ ಶಾಕಿಂಗ್‌ ನ್ಯೂಸ್‌ ಹೊರಬಿದ್ದಿದೆ. ರಸ್ತೆ ಬದಿಯಲ್ಲಿ ಪಾನಿಪುರಿ ತಿಂದ ಒಂದೇ ಕುಟುಂಬದ ಏಳು ಜನರು ತೀವ್ರ ಅಸ್ವಸ್ಥಗೊಂಡಿದ್ದಾರೆ. ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ನಡೆದಿದೆ.

ಏನಿದು ಘಟನೆ?

ಛತ್ತೀಸ್‌ಗಢದ ಪರ್ಸದಾ ಗ್ರಾಮದ ಕುಟುಂಬ ಒಂದು ಭಾನುವಾರ ರಾತ್ರಿ ದುರ್ಗಾ ಪೂಜೆಯ ಪೆಂಡಾಲ್‌ಗಳನ್ನು ನೋಡಲು ಬಿಲಾಸ್‌ಪುರಕ್ಕೆ ಬಂದಿತ್ತು. ಪೂಜೆ ಮುಗಿಸಿ ಮಧ್ಯರಾತ್ರಿ ಮನೆಗೆ ಮರಳುವಾಗ.. ರಸ್ತೆ ಬದಿಯ ಅಂಗಡಿ ಒಂದರಲ್ಲಿ ಪಾನಿಪುರಿ ತಿಂದಿದ್ದಾರೆ. ಪಾನಿಪುರಿ ತಿಂದ ಕೆಲವೇ ಕ್ಷಣಗಳಲ್ಲಿ ಕುಟುಂಬದ ಸದಸ್ಯರಿಗೆ ವಾಂತಿ, ತೀವ್ರ ಹೊಟ್ಟೆನೋವು ಮತ್ತು ಹೊಟ್ಟೆ ಸೆಳೆತ ಕಾಣಿಸಿಕೊಂಡಿದೆ. ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ, ತಕ್ಷಣವೇ ಎಲ್ಲರನ್ನೂ ಬಿಲಾಸ್‌ಪುರದ ಸಿಮ್ಸ್ (CIMS) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಮಕ್ಕಳ ಸ್ಥಿತಿ ಗಂಭೀರ

ಆಸ್ಪತ್ರೆಗೆ ದಾಖಲಾದವರಲ್ಲಿ ಮಹೇಶ್ ಸಾಹು (32), ಸಂತೋಷ್ (27), ಪ್ರಭಾ (26), ಸುಮನ್ (18), ಸುಜಿತಾ (16), ಸೋಮೇಶ್ (15) ಮತ್ತು 6 ವರ್ಷದ ಬಾಲಕ ಶಿವಾಂಶ್ ಸಾಹು ಸೇರಿದ್ದಾರೆ. ಇವರಲ್ಲಿ ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. 6 ವರ್ಷದ ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಪ್ರಸ್ತುತ ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಲುಷಿತ ಆಹಾರದಿಂದಾಗಿ (ಫುಡ್ ಪಾಯ್ಸನಿಂಗ್) ಹೀಗಾಗಿರಬಹುದು ಎಂದು ಶಂಕಿಸಲಾಗಿದೆ.

ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಸಂಬಂಧಪಟ್ಟ ಪಾನಿಪುರಿ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾನಿಪುರಿ, ಮಸಾಲಾ ನೀರು ಹಾಗೂ ಇತರ ಪದಾರ್ಥಗಳ ಮಾದರಿಗಳನ್ನು (ಸ್ಯಾಂಪಲ್) ಲ್ಯಾಬ್ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಸಲಹೆ

  • ಜನದಟ್ಟಣೆ ಮತ್ತು ಧೂಳು ಹೆಚ್ಚಾಗಿರುವ ರಸ್ತೆ ಬದಿಯ ಅಂಗಡಿಗಳಲ್ಲಿ ತಿನ್ನುವುದನ್ನು ತಪ್ಪಿಸಿ
  • ಅಂಗಡಿಯವರು ಫಿಲ್ಟರ್/ಆರ್‌ಒ (RO) ನೀರನ್ನು ಬಳಸುತ್ತಿದ್ದಾರೆಯೇ ಎಂದು ಗಮನಿಸಿ
  • ಬಿಸಿಬಿಸಿಯಾಗಿರುವ ಆಹಾರ ಪದಾರ್ಥಗಳಿಗೆ ಮಾತ್ರ ಆದ್ಯತೆ ನೀಡಿ
  • ಸಣ್ಣ ಮಕ್ಕಳಿಗೆ ರಸ್ತೆ ಬದಿಯ ತಂಪು ಪದಾರ್ಥಗಳು ಮತ್ತು ಮಸಾಲಾ ನೀರು ಕೊಡುವುದನ್ನು ತಪ್ಪಿಸಿ
  • ರಸ್ತೆ ಬದಿಯ ಆಹಾರ (ಸ್ಟ್ರೀಟ್ ಫುಡ್) ತಿನ್ನುವಾಗ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಿ
  • ಕುಡಿಯುವ ನೀರು ಮತ್ತು ಬಳಸುವ ಪದಾರ್ಥಗಳು ಶುದ್ಧವಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ
  • ಕಲುಷಿತ ಆಹಾರ ಸೇವಿಸಿ ವಾಂತಿ ಅಥವಾ ವಿಪರೀತ ಹೊಟ್ಟೆನೋವು ಕಾಣಿಸಿಕೊಂಡರೆ, ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ