* 1993ರ ಮುಂಬೈ ಸ್ಫೋಟದ ಪ್ರಕರಣದಲ್ಲಿ ಬಂಧಿಯಾದ ಉಗ್ರ ಅಬು ಸಲೇಂ* 2030ರಲ್ಲಿ ಅಬು ಸಲೇಂ ಬಿಡುಗಡೆ: ಸುಪ್ರೀಂ ಕೋರ್ಟ್‌* ಪೋರ್ಚುಗಲ್‌ಗೆ ನೀಡಿದ ಭರವಸೆ ಪ್ರಕಾರ ಬಿಡುಗಡೆ* ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಚ್‌ ತಾಕೀತು

ಮುಂಬೈ(ಜು.12): ಪೋರ್ಚುಗಲ್‌ ದೇಶಕ್ಕೆ ನೀಡಿದ ಬದ್ಧತೆಯಂತೆ 1993ರ ಮುಂಬೈ ಸ್ಫೋಟದ ಪ್ರಕರಣದಲ್ಲಿ ಬಂಧಿಯಾದ ಉಗ್ರ ಅಬು ಸಲೇಂ 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಬಳಿಕ ಆತನನ್ನು ಬಿಡುಗಡೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಆದೇಶಿಸಿದೆ. ನ.19, 2030ರಲ್ಲಿ ಸಲೇಂಗೆ ವಿಧಿಸಿದ 25 ವರ್ಷಗಳ ಜೈಲು ಶಿಕ್ಷೆ ಪೂರ್ಣಗೊಳ್ಳಲಿದೆ.

ಆದರೆ ಬೇರೊಂದು ಪ್ರಕರಣದಲ್ಲಿ ಅಬು ಸಲೇಂಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿರುವ ಹಿನ್ನೆಲೆಯಲ್ಲಿ, ತಮಗೆ 25 ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಬಾರದು ಎಂದು ಆತ ಕೋರ್ಚ್‌ ಮೊರೆ ಹೋಗಿದ್ದ. ನ್ಯಾಯಾಧೀಶ ಎಸ್‌.ಕೆ ಕೌಲ್‌ ಹಾಗೂ ಎಂ. ಎಂ ಸುರೇಂದ್ರ ಅವರನ್ನೊಳಗೊಂಡ ನ್ಯಾಯಪೀಠ ‘ಸಲೇಂ 25 ವರ್ಷದ ಶಿಕ್ಷೆ ಪೂರ್ಣಗೊಳಿಸದ ಬಳಿಕ ಕೇಂದ್ರ ಸರ್ಕಾರ ಸಂವಿಧಾನದ 72ನೇ ವಿಧಿಯಡಿಯಲ್ಲಿ ಅಧಿಕಾರವನ್ನು ಚಲಾಯಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಬೇಕು’ ಎಂದು ಆದೇಶಿಸಿದೆ.

2002ರಲ್ಲಿ ಸುದೀರ್ಘ ಕಾನೂನು ಹೋರಾಟದ ಬಳಿಕ ಪೋರ್ಚುಗಲ್‌ನಲ್ಲಿ ಬಂಧನಕ್ಕೊಳಗಾದ ಅಬು ಸಲೇಂ ಅನ್ನು ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಅಂದಿನ ಮಾಜಿ ಉಪ ಪ್ರಧಾನಿ ಎಲ್‌. ಕೆ ಅಡ್ವಾನಿ ನೀಡಿದ ಭರವಸೆಯ ಹಿನ್ನೆಲೆಯಲ್ಲಿ ಸಲೇಂ ಜೈಲು ಶಿಕ್ಷೆ 25 ವರ್ಷ ಮೀರಬಾರದು ಎಂದು ಕೋರ್ಚ್‌ ಕೇಂದ್ರಕ್ಕೆ ತಾಕೀತು ಮಾಡಿದೆ.