Asianet Suvarna News Asianet Suvarna News

ಆ.15ರೊಳಗೆ ಲಸಿಕೆ ಅಸಾಧ್ಯ: ಬೆಂಗಳೂರು ವಿಜ್ಞಾನ ಸಂಸ್ಥೆ!

ಆ.15ರೊಳಗೆ ಲಸಿಕೆ ಅಸಾಧ್ಯ: ಬೆಂಗಳೂರು ವಿಜ್ಞಾನ ಸಂಸ್ಥೆ| ಇದು ‘ಸುಲಭ ಸಾಧ್ಯವಲ್ಲ’ ಹಾಗೂ ‘ಅವಾಸ್ತವಿಕ’ ಎಂದು ಬಣ್ಣಿಸಿದೆ|  ಮಾನವರ ಮೇಲೆ ಹಂತ ಹಂತವಾಗಿ ಲಸಿಕೆಯ ಪ್ರಯೋಗ ನಡೆಯಬೇಕು

Impossible to have vaccine by August 15 say experts
Author
Bangalore, First Published Jul 7, 2020, 10:49 AM IST

 

ನವದೆಹಲಿ(ಜು.07): ಆಗಸ್ಟ್‌ 15ರೊಳಗೆ ಕೊರೋನಾ ವೈರಸ್‌ ಲಸಿಕೆಯನ್ನು ಪರೀಕ್ಷೆಗೆ ಒಳಪಡಿಸಿ ಜನರಿಗೆ ನೀಡಲು ಆರಂಭಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ನೀಡಿರುವ ಗಡುವನ್ನು ಬೆಂಗಳೂರು ಮೂಲದ ವಿಜ್ಞಾನಿಗಳ ಸಂಸ್ಥೆಯಾದ ಭಾರತೀಯ ವಿಜ್ಞಾನ ಅಕಾಡೆಮಿ ಪ್ರಶ್ನಿಸಿದೆ. ಇದು ‘ಸುಲಭ ಸಾಧ್ಯವಲ್ಲ’ ಹಾಗೂ ‘ಅವಾಸ್ತವಿಕ’ ಎಂದು ಬಣ್ಣಿಸಿದೆ. ‘ಈ ಲಸಿಕೆಯಿಂದ ವ್ಯಾಧಿ ಗುಣವಾಗುವುದೇ ಎಂದು ಸಾಬೀತಾಗಲು ಮಾನವರ ಮೇಲೆ ಹಂತ ಹಂತವಾಗಿ ಲಸಿಕೆಯ ಪ್ರಯೋಗ ನಡೆಯಬೇಕು. ಈ ವಿಷಯದಲ್ಲಿ ತರಾತುರಿ ಮಾಡಬಾರದು. ಗಡಿಬಿಡಿ ಮಾಡಿಕೊಂಡು ವೈಜ್ಞಾನಿಕ ಗುಣಮಟ್ಟದಲ್ಲಿ ರಾಜಿ ಆಗಬಾರದು’ ಎಂದು ಅಕಾಡೆಮಿ ಹೇಳಿದೆ.

‘ಲಸಿಕೆಯನ್ನು 3 ಹಂತದಲ್ಲಿ ಜನರ ಮೇಲೆ ಪರೀಕ್ಷೆಗೊಳಪಡಿಸಬೇಕಾಗುತ್ತದೆ. ಹಂತ-1ರಲ್ಲಿ ಲಸಿಕೆಯ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಬೇಕು. ಹಂತ-2ರಲ್ಲಿ ವಿವಿಧ ಡೋಸ್‌ಗಳನ್ನು ನೀಡಿದಾಗ ಅದರ ಅಡ್ಡ ಪರಿಣಾಮ ಹಾಗೂ ಕ್ಷಮತೆಯ ಪರೀಕ್ಷೆ ನಡೆಯಬೇಕು. ಹಂತ-3ರಲ್ಲಿ ಸಾವಿರಾರು ಆರೋಗ್ಯವಂತ ಜನರ ಮೇಲೆ ಅದರ ಪರೀಕ್ಷೆ ನಡೆದಾಗ ಸುರಕ್ಷಿತ ಹಾಗೂ ಕ್ಷಮತೆಯುಳ್ಳದ್ದು ಎಂದು ಸಾಬೀತಾಗಬೇಕಾಗುತ್ತದೆ. ಒಂದು ವೇಳೆ ಹಂತ-1ರಲ್ಲೇ ಲಸಿಕೆಯಲ್ಲಿ ದೋಷ ಕಂಡುಬಂದರೆ 2ನೇ ಹಂತದ ಪರೀಕ್ಷೆ ನಡೆಯದು. ಹೀಗಾಗಿ ತರಾತುರಿ ಸಲ್ಲದು’ ಎಂದು ಅದು ವಿವರಿಸಿದೆ.

ಆದಾಗ್ಯೂ ಕೊರೋನಾ ಲಸಿಕೆ ಬೇಗ ಜನರಿಗೆ ಲಭಿಸುವಂತಾಗಲಿ ಎಂದು ಅದು ಆಶಿಸಿದೆ.

ಕೋವಿಡ್‌-19 ಲಸಿಕೆಯ ಕ್ಲಿನಿಕಲ್‌ ಪ್ರಯೋಗ ಮುಗಿದ ಬಳಿಕ ಆಗಸ್ಟ್‌ 15ರ ವೇಳೆಗೆ ಅದು ಲಭ್ಯವಾಗುವಂತೆ ಎದುರು ನೋಡಲಾಗುತ್ತಿದೆ ಎಂದು ಐಸಿಎಂಆರ್‌ ಇತ್ತೀಚೆಗೆ ಹೇಳಿತ್ತು. ಭಾರತ್‌ ಬಯೋಟೆಕ್‌ ಇಂಡಿಯಾ ಲಿ. ಎಂಬ ಖಾಸಗಿ ಔಷಧ ಕಂಪನಿಯೊಂದು ಐಸಿಎಂಆರ್‌ ಜತೆ ಸೇರಿ ಕೊರೋನಾ-ಸಾರ್ಸ್‌ ಲಸಿಕೆಯನ್ನು ಸಿದ್ಧಪಡಿಸುತ್ತಿದೆ.

Follow Us:
Download App:
  • android
  • ios