ಎಲ್ ನಿನೊ ಪ್ರಭಾವದಿಂದಾಗಿ ಈ ಬಾರಿಯ ನವೆಂಬರ್ ತಿಂಗಳಲ್ಲಿ ದೇಶಾದ್ಯಂತ ಚಳಿಯ ಬದಲು ಬೆಚ್ಚಗಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಾಪಮಾನ ಏರಿಕೆಯ ಜೊತೆಗೆ ಮಳೆಯ ಪ್ರಮಾಣದಲ್ಲೂ ಭಾರಿ ಕೊರತೆಯಾಗಲಿದ್ದು, ದಕ್ಷಿಣ ಭಾರತದಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.
ಚಳಿಗಾಲದ ಆರಂಭದೊಂದಿಗೆ ತಾಪಮಾನದಲ್ಲಿ ಇಳಿಕೆಯಾಗಿ ತಂಪಾದ ವಾತಾವರಣವನ್ನು ನಿರೀಕ್ಷಿಸುತ್ತಿದ್ದ ದೇಶದ ಜನತೆಗೆ ಈ ಬಾರಿ ಭಾರತ ಹವಾಮಾನ ಇಲಾಖೆ (ಐಎಂಡಿ) ನಿರಾಶಾದಾಯಕ ಸುದ್ದಿಯೊಂದನ್ನು ನೀಡಿದೆ. ಇಲಾಖೆ ಬಿಡುಗಡೆ ಮಾಡಿರುವ ಮಾಸಿಕ ಮುನ್ಸೂಚನೆಯ ಪ್ರಕಾರ, ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ಅತ್ಯಂತ ತೀವ್ರ ಸ್ವರೂಪದ 'ಎಲ್ ನಿನೊ' ಪ್ರವಾಹದ ಪರಿಣಾಮವಾಗಿ, ಈ ಬಾರಿಯ ನವೆಂಬರ್ ತಿಂಗಳಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ವಾತಾವರಣವು ಸಾಮಾನ್ಯಕ್ಕಿಂತ ಬೆಚ್ಚಗಿರಲಿದೆ. ಹಿಮಾಲಯದ ತಪ್ಪಲಿನ ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಬಹುತೇಕ ಕಡೆಗಳಲ್ಲಿ ಹಗಲಿನ ಗರಿಷ್ಠ ತಾಪಮಾನ ಹಾಗೂ ರಾತ್ರಿಯ ಕನಿಷ್ಠ ತಾಪಮಾನ ಎರಡೂ ಸಾಮಾನ್ಯಕ್ಕಿಂತ ಹೆಚ್ಚಿರಲಿದೆ ಎಂದು ಐಎಂಡಿ ಅಂದಾಜಿಸಿದೆ.
ತಾಪಮಾನದಲ್ಲಿ ವ್ಯತ್ಯಾಸ; ಹಗಲು-ರಾತ್ರಿ ಬೆಚ್ಚಗಿನ ಅನುಭವ!
ಹವಾಮಾನ ಇಲಾಖೆಯ ವರದಿಯಂತೆ, ಹಿಮಾಲಯದ ತಪ್ಪಲು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಹೆಚ್ಚಿನ ಭಾಗಗಳಲ್ಲಿ ನವೆಂಬರ್ನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅಧಿಕವಾಗಿರಲಿದೆ. ಹಾಗೆಯೇ, ಹೆಚ್ಚಿನ ಪ್ರದೇಶಗಳಲ್ಲಿ ರಾತ್ರಿಯ ತಾಪಮಾನವೂ ವಾಡಿಕೆಗಿಂತ ಹೆಚ್ಚಾಗಿಯೇ ಇರುವ ಸಾಧ್ಯತೆಯಿದೆ. ಆದಾಗ್ಯೂ, ಮಧ್ಯ ಮತ್ತು ಪೂರ್ವ ಭಾರತದ ಅನೇಕ ಭಾಗಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಕೊಂಚ ಕಡಿಮೆ ಇರಲಿದೆ. ಇದರರ್ಥ ಈ ನಿರ್ದಿಷ್ಟ ಪ್ರದೇಶಗಳಲ್ಲಿ ರಾತ್ರಿ ವೇಳೆ ತುಲನಾತ್ಮಕವಾಗಿ ತಂಪಾದ ವಾತಾವರಣವಿರಬಹುದು. ಆದರೆ, ದೇಶದ ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ ಹಗಲು ಮತ್ತು ರಾತ್ರಿ ಎರಡೂ ಅವಧಿಯಲ್ಲೂ ಜನರು ಸಾಮಾನ್ಯಕ್ಕಿಂತ ಹೆಚ್ಚಿನ ಬೆಚ್ಚಗಿನ ತಾಪಮಾನವನ್ನು ಅನುಭವಿಸುವ ನಿರೀಕ್ಷೆಯಿದೆ.
ಸಾಮಾನ್ಯಕ್ಕಿಂತ ಕಡಿಮೆ ಮಳೆ!
ತಾಪಮಾನದ ಏರಿಕೆಯ ಜೊತೆಗೆ ಮಳೆಯ ಪ್ರಮಾಣದಲ್ಲೂ ಈ ಬಾರಿ ಭಾರಿ ಕೊರತೆ ಎದುರಾಗುವ ಲಕ್ಷಣಗಳಿವೆ. ಮಧ್ಯ, ವಾಯುವ್ಯ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳನ್ನು ಹೊರತುಪಡಿಸಿ, ನವೆಂಬರ್ನಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಒಟ್ಟಾರೆಯಾಗಿ ದೇಶಾದ್ಯಂತ ನವೆಂಬರ್ ತಿಂಗಳ ಒಟ್ಟು ಮಳೆಯು ದೀರ್ಘಾವಧಿಯ ಸರಾಸರಿಯ ಸುಮಾರು ಶೇ. 77% ರಷ್ಟು ಮಾತ್ರ ಇರಲಿದೆ ಎಂದು ಅಂದಾಜಿಸಲಾಗಿದೆ. 1971 ರಿಂದ 2020 ರವರೆಗಿನ ದತ್ತಾಂಶಗಳ ಆಧಾರದ ಮೇಲೆ, ನವೆಂಬರ್ ತಿಂಗಳಲ್ಲಿ ಇಡೀ ದೇಶದ ದೀರ್ಘಾವಧಿ ಸರಾಸರಿ ಮಳೆಯ ಪ್ರಮಾಣ 29.7 ಮಿ.ಮೀ. ಆಗಿದೆ. ಆದರೆ ಈ ಬಾರಿಯ ಎಲ್ ನಿನೊ ಪರಿಣಾಮದಿಂದಾಗಿ ದೇಶದಲ್ಲಿ ಸರಾಸರಿ 22.9 ಮಿ.ಮೀ. ಮಳೆ ಮಾತ್ರ ಬೀಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಭಾರತದಲ್ಲೂ ಕನಿಷ್ಠ ಮಳೆ ಮುನ್ಸೂಚನೆ!
ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲೂ ಈ ಬಾರಿ ನವೆಂಬರ್ನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಮುನ್ಸೂಚನೆಯಿದೆ. ಈ ಪ್ರದೇಶದಲ್ಲಿಯೂ ದೀರ್ಘಾವಧಿ ಸರಾಸರಿಯ ಸರಿಸುಮಾರು ಶೇ. 77ರಷ್ಟು ಮಳೆಯಾಗಲಿದೆ. 1971ರಿಂದ 2020ರವರೆಗಿನ ದತ್ತಾಂಶದ ಪ್ರಕಾರ ದಕ್ಷಿಣ ಪರ್ಯಾಯ ದ್ವೀಪ ಭಾರತದಲ್ಲಿ ನವೆಂಬರ್ನಲ್ಲಿ ಮಳೆಯಾಗುವ ಎಲ್ಪಿಎ ಸರಿಸುಮಾರು 118.7 ಮಿ.ಮೀ. ಆಗಿದೆ. ಆದರೆ ಪ್ರಸಕ್ತ ಸಾಲಿನಲ್ಲಿ ಈ ಪ್ರದೇಶದಲ್ಲಿ ಸರಿಸುಮಾರು 91.4 ಮಿ.ಮೀ. ನಷ್ಟು ಮಳೆಯಷ್ಟೇ ಬೀಳಬಹುದು ಎಂದು ಐಎಂಡಿ ಅಂದಾಜಿಸಿದೆ.
ಎಲ್ ನಿನೊ ಪರಿಣಾಮ ಮತ್ತು ಮುಂಬರುವ ದಿನಗಳ ಸ್ಥಿತಿಗತಿ!
ಸಮಭಾಜಕ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನದಲ್ಲಿ ಉಂಟಾಗುವ ಅಸಾಮಾನ್ಯ ಹೆಚ್ಚಳವನ್ನು 'ಎಲ್ ನಿನೊ' ಎಂದು ಕರೆಯಲಾಗುತ್ತದೆ. ಇದು ಪ್ರಪಂಚದ ಅನೇಕ ಪ್ರದೇಶಗಳಲ್ಲಿನ ಹವಾಮಾನದ ಮೇಲೆ ಭಾರಿ ಪ್ರಭಾವ ಬೀರುತ್ತದೆ. ಮಾನ್ಸೂನ್ ಮಿಷನ್ ಕಪಲ್ಡ್ ಫೋರ್ಕಾಸ್ಟ್ ಸಿಸ್ಟಮ್ ಸೇರಿದಂತೆ ವಿವಿಧ ಜಾಗತಿಕ ಹವಾಮಾನ ಮಾದರಿಗಳ ಇತ್ತೀಚಿನ ಮುನ್ಸೂಚನೆಗಳ ಪ್ರಕಾರ, ಪ್ರಸ್ತುತ ಪೆಸಿಫಿಕ್ ಮಹಾಸಾಗರದಲ್ಲಿ ಚಾಲ್ತಿಯಲ್ಲಿರುವ ಬಲವಾದ ಎಲ್ ನಿನೊ ಪರಿಸ್ಥಿತಿಯು ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲೂ ಮುಂದುವರಿಯಲಿದೆ.






