*   ಗ್ರಾಹಕ ಆಯೋಗಗಳಿಗೆ ದೂರು ನೀಡುವ ವ್ಯವಸ್ಥೆ ಶೀಘ್ರ ಜಾರಿ*   ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಕಾನೂನುಬಾಹಿರ*   ಶೀಘ್ರದಲ್ಲೇ ಈ ಸಂಬಂಧ ಹೊಸ ಮಾರ್ಗದರ್ಶಿ ಸೂತ್ರ ಪ್ರಕಟ 

ನವದೆಹಲಿ(ಜು.03): ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕದ ಹೆಸರಿನಲ್ಲಿ ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವುದು ಕಾನೂನುಬಾಹಿರ ಎಂದು ಪ್ರಕಟಿಸಿದ್ದ ಕೇಂದ್ರ ಸರ್ಕಾರ ಇದೀಗ ಆ ಕುರಿತು ಗ್ರಾಹಕರು ದೂರು ನೀಡಲು ವ್ಯವಸ್ಥೆಯೊಂದನ್ನು ಜಾರಿಗೆ ತರಲು ನಿರ್ಧರಿಸಿದೆ. ಶೀಘ್ರದಲ್ಲೇ ಈ ಸಂಬಂಧ ಹೊಸ ಮಾರ್ಗದರ್ಶಿ ಸೂತ್ರಗಳು ಪ್ರಕಟವಾಗಲಿವೆ.

‘ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸಿದರೆ ಜನರು ಗ್ರಾಹಕ ಆಯೋಗಗಳಿಗೆ ಹಾಗೂ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ)ಕ್ಕೆ ದೂರು ನೀಡುವ ವ್ಯವಸ್ಥೆ ಕೆಲವೇ ದಿನಗಳಲ್ಲಿ ಜಾರಿಗೆ ಬರಲಿದೆ’ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರಲ್ಲಿ ಇನ್ಮುಂದೆ 24/7 ಹೋಟೆಲ್ ಓಪನ್‌, ರಾತ್ರಿ ಪಾಳಿ ಉದ್ಯೋಗಿಗಳಿಗೆ ನೋ ಟೆನ್ಶನ್

‘ಹೋಟೆಲ್‌ಗಳು ಆಹಾರದ ದರಕ್ಕಿಂತ ಹೆಚ್ಚಾಗಿ ಏನನ್ನೂ ಗ್ರಾಹಕರಿಂದ ಕೇಳುವಂತಿಲ್ಲ. ಗ್ರಾಹಕರೇ ಬೇಕಾದರೆ ಸ್ವಯಂಪ್ರೇರಿತರಾಗಿ ಸೇವಾ ಶುಲ್ಕ ಅಥವಾ ಟಿಫ್ಸ್‌ ನೀಡಬಹುದು. ಇಂತಹ ಚಾಜ್‌ರ್‍ಗಳನ್ನು ಕಡ್ಡಾಯವಾಗಿ ಗ್ರಾಹಕರಿಂದ ಪಡೆಯುವುದನ್ನು ತಪ್ಪಿಸುವ ನಿಯಮಗಳು ಹಿಂದೆ ಇರಲಿಲ್ಲ. ಈಗ ಸ್ಪಷ್ಟವಾಗಿ ಇದು ‘ಕಾನೂನುಬಾಹಿರ’ ಎಂದು ನಿಯಮಾವಳಿ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

2017ರಲ್ಲಿ ಪ್ರಕಟಿಸಿದ್ದ ನಿಯಮಾವಳಿಯಲ್ಲಿ ಹೋಟೆಲ್‌ಗಳು ಬಯಸಿದರೆ ಬಿಲ್‌ನಲ್ಲಿ ಆಹಾರಗಳ ದರಪಟ್ಟಿಯ ಕೆಳಗೆ ಸ್ವಲ್ಪ ಜಾಗ ಖಾಲಿ ಬಿಟ್ಟು ಪ್ರತ್ಯೇಕ ಹೆಡ್‌ನಲ್ಲಿ ಸೇವಾ ಶುಲ್ಕವನ್ನು ನಮೂದಿಸಲು ಅವಕಾಶವಿತ್ತು. ಗ್ರಾಹಕರು ಬಯಸಿದರೆ ಅದನ್ನು ಪಾವತಿಸಬಹುದು ಎಂದು ಹೇಳಲಾಗಿತ್ತು. ಆದರೆ ಇದು ಹೋಟೆಲಿಗರಲ್ಲಿ ಹಾಗೂ ಜನರಲ್ಲಿ ಗೊಂದಲಕ್ಕೆ ಕಾರಣವಾಗಿ, ಹೋಟೆಲ್‌ಗಳು ಸೇವಾ ಶುಲ್ಕವನ್ನು ಕಡ್ಡಾಯವಾಗಿ ಗ್ರಾಹಕರಿಂದ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದವು.