Hindutva| 'ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆಯೇ ಉಳಿದುಕೊಳ್ಳುವುದಿಲ್ಲ'
* ವಿವಾದ ಸೃಷ್ಟಿಸುತ್ತಿದೆ ಸಲ್ಮಾನ್ ಖುರ್ಷಿದ್ ಹಿಂದುತ್ವದ ಬಗ್ಗೆ ಕೊಟ್ಟ ಹೇಳಿಕೆ
* ಬೋಕೋ ಹರಾಂ, ಐಸಿಸ್ ಜತೆ ಹಿಂದುತ್ವ ಹೋಲಿಕೆ
* ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆಯೇ ಉಳಿದುಕೊಳ್ಳುವುದಿಲ್ಲ ಎಂದ ಬಿಜೆಪಿ ನಾಯಕ
ನವದೆಹಲಿ(ನ.14): ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ (Congress Leader Salman Khurshid) ಹಿಂದುತ್ವದ ಬಗ್ಗೆ ನೀಡುತ್ತಿರುವ ಹೇಳಿಕೆ ಹಾಗೂ ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ ಅಂಶಗಳು ಬಹುದೊಡ್ಡ ವಿವಾದವನ್ನೇ ಸೃಷ್ಟಿಸಿವೆ. ಹೀಗಿರುವಾಗ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ (G Kishan reddy) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದು, ಇದು ಧರ್ಮದ ಆಧಾರದ ಮೇಲೆ ಶಾಂತಿಯನ್ನು ಕೆಡಿಸುತ್ತಿದೆ ಎಂದು ಕಿಡಿ ದೂರಿದ್ದಾರೆ. ಅಲ್ಲದೇ ಹಿಂದೂಗಳು ಅಲ್ಪಸಂಖ್ಯಾತರಾದರೆ, ಭಾರತದಲ್ಲಿ ಜಾತ್ಯಾತೀತತೆ (Secularism) ಎಂಬುವುದೇ ಉಳಿದುಕೊಳ್ಳುವುದಿಲ್ಲ ಎಂದೂ ನುಡಿದಿದ್ದಾರೆ.
ಆರ್‌ಎಸ್‌ಎಸ್ (RSS)ಅನ್ನು ಬೊಕೊ ಹರಾಮ್ ಮತ್ತು ಐಸಿಸ್‌ಗೆ (ISIS) ಸಹೋಲಿಸಿದ ಖುರ್ಷಿದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಜಿ ಕಿಶನ್ ರೆಡ್ಡಿ, ಹಿರಿಯ ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗಳು ಖಂಡನೀಯ "ಭಾರತದಲ್ಲಿ ಹಿಂದೂಗಳು (Hindus) ಇರುವವರೆಗೂ ಇಲ್ಲಿ ಜಾತ್ಯತೀತತೆ ಇರುತ್ತದೆ. ಅವರು ಅಲ್ಪಸಂಖ್ಯಾತರಾದ ದಿನ ಜಾತ್ಯತೀತತೆ ಉಳಿದುಕೊಳ್ಳುವುದಿಲ್ಲ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತೆಯೇ ಇಲ್ಲೂ ಆಗುತ್ತದೆ" ಎಂದು ಅವರು ಹೇಳಿದ್ದಾರೆ.
ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ ಎಂದಿರುವ ಕಿಶನ್ ರೆಡ್ಡಿ, ಚುನಾವಣಾ ಸಂದರ್ಭದಲ್ಲಿ ಧರ್ಮದ ಆಧಾರದ ಮೇಲೆ ಶಾಂತಿಯನ್ನು ಕೆಡಿಸುವುದು ಕಾಂಗ್ರೆಸ್ ಪ್ರಯತ್ನವಾಗಿದೆ ಎಂದು ಕೇಂದ್ರ ಸಚಿವರು ಆರೋಪಿಸಿದ್ದಾರೆ. ''ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷವು ಧರ್ಮದ ಆಧಾರದಲ್ಲಿ ಕೋಮುವಾದಕ್ಕೆ ಪ್ರಚೋದಿಸುತ್ತಿದೆ. ಕಾಂಗ್ರೆಸ್ (Congress) ಪಕ್ಷದ ನಾಯಕರೇ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯಬೇಡಿ, ಚುನಾವಣೆಗಾಗಿ ಜನರನ್ನು ಧರ್ಮದ ಆಧಾರದ ಮೇಲೆ ಬೇರೆಡೆಗೆ ತಿರುಗಿಸಬೇಡಿ ಎಂದು ನಾನು ವಿನಂತಿಸುತ್ತೇನೆ' ಎಂದಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು (Jammu Kashmir) ಹೊರತುಪಡಿಸಿ ಯಾವುದೇ ಕೋಮು ಬಿಕ್ಕಟ್ಟು, ಕರ್ಫ್ಯೂ, ಬಾಂಬ್ ಸ್ಫೋಟ, ಭಯೋತ್ಪಾದಕ ಘಟನೆಗಳು ನಡೆದಿಲ್ಲ ಎಂದೂ ಜಿ ಕಿಶನ್ ರೆಡ್ಡಿ ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.
ಏನಿದು ವಿವಾದ? ಬೋಕೋ ಹರಾಂ, ಐಸಿಸ್ ಜತೆ ಹಿಂದುತ್ವ
ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್‌ರ ಹೊಸ ಪುಸ್ತಕ ‘ಅಯೋಧ್ಯೆ ವರ್ಡಿಕ್ಟ್’ನಲ್ಲಿ ಹಿಂದುತ್ವವನ್ನು ಜಿಹಾದಿ ಐಸಿಸ್ ಮತ್ತು ಬೋಕೋ ಹರಾಂ ಭಯೋತ್ಪಾದಕ ಸಂಘಟನೆಗಳ ಜತೆ ಹೋಲಿಕೆ ಮಾಡಿದ್ದು, ಭಾರೀ ವಿವಾಹಕ್ಕೆ ಎಡೆ ಮಾಡಿಕೊಟ್ಟಿದೆ.
ಪುಸ್ತಕದಲ್ಲಿನ ‘ದಿ ಸ್ಯಾಫ್ರಾನ್ ಸ್ಕೈ(ಉತ್ತುಂಗದತ್ತ ಕೇಸರಿ) ಎಂಬ ಅಧ್ಯಾಯದ 113ನೇ ಪುಟದಲ್ಲಿ ‘ಒಂದು ಕಾಲದಲ್ಲಿ ಸನಾತನ ಧರ್ಮ ಮತ್ತು ಸಾಂಪ್ರದಾಯಿಕ ಹಿಂದು ಧರ್ಮವು ಋುಷಿ-ಮುನಿಗಳಿಂದ ಪ್ರಖ್ಯಾತವಾಗಿತ್ತು. ಆದರೆ ಋುಷಿ-ಮುನಿಗಳನ್ನು ಮೂಲೆಗುಂಪು ಮಾಡಿ ರಾಜಕೀಯ ಸ್ವರೂಪ ಪಡೆಯುತ್ತಿರುವ ಹಿಂದುತ್ವವಾದವು, ಇತ್ತೀಚಿನ ವರ್ಷಗಳಲ್ಲಿ ಇಸ್ಲಾಂ ಜಿಹಾದಿ ಭಯೋತ್ಪಾದಕ ಸಂಘಟನೆಗಳಾದ ಐಸಿಸ್ ಮತ್ತು ಬೋಕೋ ಹರಾಂ ರೀತಿ ಬದಲಾಗುತ್ತಿದೆ. ಅಯೋಧ್ಯೆ ರಾಮ ಜನ್ಮಭೂಮಿ ವಿವಾದದ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್, ಹಿಂದೂ ರಾಷ್ಟ್ರ ಪರಿಕಲ್ಪನೆಯನ್ನು ತಿರಸ್ಕರಿಸಿದೆ ಎಂದು ಖುರ್ಷಿದ್ ಅವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ತಮ್ಮ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಖುರ್ಷಿದ್, ‘ಅಯೋಧ್ಯೆ ರಾಮ ಜನ್ಮಭೂಮಿ ವ್ಯಾಜ್ಯದ ಕುರಿತು ಸುಪ್ರೀಂ ಕೋರ್ಟ್ ಯಾವ ಆಧಾರದಲ್ಲಿ ಯಾಕೆ ಮತ್ತು ಹೇಗೆ ಈ ತೀರ್ಪು ನೀಡಿದೆ ಎಂಬುದನ್ನು ಯಾರೂ ನೋಡಿಲ್ಲ. ಆದರೆ ಹಲವರು ತಮಗೆ ಬೇಕಾದಂತೆ ಸುಪ್ರೀಂ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಥವರಿಗೆ ಸುಪ್ರೀಂ ಕೋರ್ಟಿನ ತೀರ್ಪು ಮನದಟ್ಟು ಮಾಡುವುದು ನನ್ನ ಜವಾಬ್ದಾರಿ’ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಈ ತೀರ್ಪು ತಮಗಾದ ಸೋಲು ಎಂದುಕೊಳ್ಳುವ ಬದಲಿಗೆ, ಇದು ಸಾಮರಸ್ಯದ ಕ್ಷಣವೆಂದು ಪರಿಭಾವಿಸಲು ಮುಸ್ಲಿಮರಿಗೆ ಪ್ರೇರೇಪಿಸಲು ಸಹಕಾರಿಯಾಗಿದೆ ಎಂದಿದ್ದಾರೆ ಖುರ್ಷಿದ್.
ಚುನಾವಣೆಗೆ ತಯಾರಿ
ದೇಶದ ಏಳು ರಾಜ್ಯಗಳಾದ ಗೋವಾ, ಮಣಿಪುರ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಗುಜರಾತ್ 2022 ರಲ್ಲಿ ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿ ಈ ವಿವಾದ ಮಹತ್ವದ ತಿರುವು ಪಡೆದುಕೊಳ್ಳಲಿದೆ.