ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಈ ಅವಧಿಯ ಸಂಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಪೂರೈಸಿದರೆ ದೇಶದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ಖ್ಯಾತಿಗೆ ಭಾಜನರಾಗಲಿದ್ದಾರೆ. ಪ್ರಸ್ತುತ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಮ್ಲಿಂಗ್‌ ಅವರ ಬಳಿ ಈ ಬಿರುದು ಇದೆ.

ಪಟನಾ: ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಈ ಅವಧಿಯ ಸಂಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ಪೂರೈಸಿದರೆ ದೇಶದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆದ ಖ್ಯಾತಿಗೆ ಭಾಜನರಾಗಲಿದ್ದಾರೆ. ಪ್ರಸ್ತುತ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್‌ ಕುಮಾರ್‌ ಚಮ್ಲಿಂಗ್‌ ಅವರ ಬಳಿ ಈ ಬಿರುದು ಇದೆ. ಇವರು 24 ವರ್ಷ 166 ದಿನಗಳ ಕಾಲ ಸಿಎಂ ಸ್ಥಾನದಲ್ಲಿದ್ದರು.

ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್‌ 24 ವರ್ಷ

ಇವರ ನಂತರದಲ್ಲಿ ಒಡಿಶಾದ ಮಾಜಿ ಸಿಎಂ ನವೀನ್ ಪಟ್ನಾಯಕ್‌ (24 ವರ್ಷ 99 ದಿನ), ಜ್ಯೋತಿ ಬಸು (ಪಶ್ಚಿಮ ಬಂಗಾಳ) (23 ವರ್ಷ 138 ದಿನ), ಗಿಗಾಂಗ್‌ ಅಪಂಗ್‌ (ಅರುಣಾಚಲ ಪ್ರದೇಶ) (22 ವರ್ಷ 250 ದಿನ), ಲಾಲ್‌ ಥನ್‌ಹಾವ್ಲಾ (ಮಿಜೋರಂ) (22 ವರ್ಷ 59 ದಿನ), ವೀರಭದ್ರ ಸಿಂಗ್ (ಹಿಮಾಚಲ) (21 ವರ್ಷ 13 ದಿನ), ಮಾಣಿಕ್‌ ಸರ್ಕಾರ್‌ (ತ್ರಿಪುರ) (19 ವರ್ಷ 363 ದಿನ) ಇವರ ನಂತರದಲ್ಲಿ ಸಿಎಂ ನಿತೀಶ್‌ ಕುಮಾರ್‌ 19 ವರ್ಷ 85 ದಿನಗಳ ಕಾಲ ಸಿಎಂ ಆಗಿದ್ದಾರೆ. ಒಂದು ವೇಳೆ ಈ ಅವಧಿ ಪೂರ್ಣಗೊಳಿಸಿದರೆ, ಅಗ್ರಸ್ಥಾನಕ್ಕೆ ಬರಲಿದ್ದಾರೆ.

ನ.19ಕ್ಕೆ ಸಿಎಂ ಆಗಿ ನಿತೀಶ್‌ ಕುಮಾರ್‌ ಪ್ರಮಾಣ?

ಪಟನಾ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ, ಸಿಎಂ ನಿತೀಶ್‌ ಕುಮಾರ್‌ ಅವರೇ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಇದೇ ನ.19ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಗುಸುಗುಸು ಎದ್ದಿದೆ. ಇದು ಸಾಧ್ಯವಾದರೆ 10ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಇತಿಹಾಸವನ್ನು ನಿತೀಶ್‌ ಬರೆಯಲಿದ್ದಾರೆ. ಚುನಾವಣೆಗೂ ಮೊದಲು ತಮ್ಮ ಸಿಎಂ ಅಭ್ಯರ್ಥಿಯನ್ನು ಎನ್‌ಡಿಎ ಮೈತ್ರಿಕೂಟ ಘೋಷಿಸಿರಲಿಲ್ಲ. ಈಗ ಬಿಜೆಪಿ 89 ಮತ್ತು ಜೆಡಿಯು 85 ಸ್ಥಾನಗಳನ್ನು ಗೆದ್ದಿರುವುದರಿಂದ ಸಿಎಂ ಗಾದಿ ಯಾರ ಪಾಲಾಗಲಿದೆ ಎಂಬ ಕುತೂಹಲವಿದೆ.