ತಂಜಾವೂರು[ಜ.21]: ಇದೇ ಮೊದಲ ಬಾರಿಗೆ ಭಾರತೀಯ ವಾಯುಪಡೆಯು ದಕ್ಷಿಣ ಭಾರತದಲ್ಲಿ ಸುಖೋಯ್‌-30 ಎಂಕೆಐ ಯುದ್ಧವಿಮಾನವನ್ನು ನಿಯೋಜಿಸಿದೆ. ಬ್ರಹ್ಮೋಸ್‌ ಕ್ಷಿಪಣಿಯನ್ನು ಹೊತ್ತೊಯ್ದು ಸಾಗಬಲ್ಲ ಮಾದರಿಯಲ್ಲಿ ಸುಖೋಯ್‌ ವಿಮಾನ ಮಾರ್ಪಡಿಸಲಾಗಿದ್ದು, ಸೋಮವಾರ ತಮಿಳುನಾಡಿನ ತಂಜಾವೂರಿನ ವಾಯುನೆಲೆಯಲ್ಲಿ ಇದನ್ನು ನಿಯೋಜಿಸಲಾಯಿತು.

ಭಾರತದ ರಕ್ಷಣಾ ದೃಷ್ಟಿಯಿಂದ ವಾಯುಪಡೆಯ ಈ ಕ್ರಮವು ಮಹತ್ವದ್ದಾಗಿದೆ. ಏಕೆಂದರೆ ವ್ಯೂಹಾತ್ಮಕವಾಗಿ ದೇಶಕ್ಕೆ ಮಹತ್ವದ್ದಾಗಿರುವ ಹಿಂದೂ ಮಹಾಸಗರ ವಲಯ ಹಾಗೂ ದಕ್ಷಿಣ ಭಾರತಕ್ಕೆ ಸಂಭಾವ್ಯ ವೈರಿ ದಾಳಿಯಿಂದ ಸುಖೋಯ್‌ ಯುದ್ಧವಿಮಾನಗಳು ರಕ್ಷಣೆ ನೀಡಲಿವೆ ಹಾಗೂ ಅಗತ್ಯ ಬಿದ್ದರೆ ದಾಳಿಯನ್ನೂ ನಡೆಸಲಿವೆ. ಹಿಂದೂ ಮಹಾಸಾಗರದಲ್ಲಿ ಚೀನಾ ನೆಲೆಯೂರಲು ಯತ್ನಿಸುತ್ತಿರುವ ನಡುವೆಯೇ ಭಾರತವು ಇವುಗಳನ್ನು ನಿಯೋಜನೆ ಮಾಡಿದೆ. ಹೀಗಾಗಿ ಚೀನಾ ಹಿಮ್ಮೆಟ್ಟಿಸಲು ಬ್ರಹ್ಮೋಸ್‌ ಸಜ್ಜಿತ ಸುಖೋಯ್‌-30 ಎಂಕೆಐ ವಿಮಾನಗಳು ನೆರವಾಗಲಿವೆ ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ.

ವಾಯುಸೇನೆ ದಿನಾಚರಣೆ ವೇಳೆ ಬಯಲಾಯ್ತು ಪಾಕ್ ಸುಳ್ಳು: ಅದಾಡುವ ಮಾತೆಲ್ಲಾ ಜೊಳ್ಳು!

300 ಕಿ.ಮೀ. ದೂರದ ಗುರಿಗಳನ್ನು ತಲುಪಬಲ್ಲ ಬ್ರಹ್ಮೋಸ್‌ ಕ್ಷಿಪಣಿ ಸಜ್ಜಿತ ಸುಖೋಯ್‌ ಯುದ್ಧವಿಮಾನದ ‘ಟೈಗರ್‌ಶಾರ್ಕ್ಸ್‌’ ಪಡೆಗಳನ್ನು ಭಾರತದ ಸಶಕ್ತ ಪಡೆಗಳ ಮುಖ್ಯಸ್ಥ ಜ

ಬಿಪಿನ್‌ ರಾವತ್‌ ಅವರು ತಂಜಾವೂರು ವಾಯುನೆಲೆಗೆ ಸೇರ್ಪಡೆಗೊಳಿಸಿದರು. ಈ ವೇಳೆ ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ರಾಕೇಶ್‌ ಭದೌರಿಯಾ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈಗ ಟೈಗರ್‌ಶಾರ್ಕ್ಸ್‌ ಪಡೆಗೆ 5-6 ಯುದ್ಧ ಸುಖೋಯ್‌ ವಿಮಾನಗಳನ್ನು ಒದಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಪಡೆಯ ಗರಿಷ್ಠ ಸಾಮರ್ಥ್ಯವಾದ 18 ವಿಮಾನಗಳನ್ನು ನೀಡಲಾಗುತ್ತದೆ.

ಸಾಮರ್ಥ್ಯ ಏನು?:

ಸುಖೋಯ್‌-30 ಎಂಕೆಐ ಯುದ್ಧವಿಮಾನಗಳು ವಿವಿಧ ವಿಧಾನಗಳಿಂದ ದಾಳಿ ಮಾಡಬಲ್ಲ ಅತ್ಯಾಧುನಿಕ ಯುದ್ಧವಿಮಾನಗಳಾಗಿವೆ. ವಾಯುದಾಳಿ, ಭೂಮಿಯ ಮೇಲಿಂದಲೇ ದಾಳಿ ಹಾಗೂ ಸಾಗರದಲ್ಲೂ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಇವುಗಳಿಗೆ ಈಗ ಬ್ರಹ್ಮೋಸ್‌ ಕ್ಷಿಪಣಿ ಅಳವಡಿಕೆ ಮಾಡಿರುವುದರಿಂದ ಈ ವಿಮಾನಗಳು ಇದ್ದ ಸ್ಥಳದಿಂದ 300 ಕಿ.ಮೀ. ದೂರದ ಗುರಿಯನ್ನು ಕ್ಷಿಪಣಿ ತಲುಪಬಲ್ಲದು.

ಈ ಬಗ್ಗೆ ಹೇಳಿಕೆ ನೀಡಿರುವ ವಾಯುಪಡೆ, ‘ಸುಖೋಯ್‌ ಒಳಗೊಂಡ ಟೈಗರ್‌ಶಾರ್ಕ್ಸ್‌ ಪಡೆಗಳನ್ನು ತಂಜಾವೂರಿನಲ್ಲಿ ನಿಯೋಜಿಸಿರುವ ಕಾರಣ ದಕ್ಷಿಣ ಭಾರತದ ವಾಯುವಲಯವು ಸಶಕ್ತಗೊಳ್ಳಲಿದೆ. ಸಮುದ್ರ ವಲಯದಲ್ಲಿರುವ ಭಾರತದ ದ್ವೀಪಗಳು, ಹಿಂದೂ ಮಹಾಸಾಗರದಲ್ಲಿನ ನಮ್ಮ ಸಾಗರ ಸೀಮೆಗೆ ಇದರಿಂದ ರಕ್ಷಣೆ ಸಿಗಲಿದೆ. ಯುದ್ಧ ವಿಮಾನದ ಬಲವುಳ್ಳ ಪಡೆಗಳು, ಈ ವಲಯದಲ್ಲಿನ ನಮ್ಮ ಮಹತ್ವದ ನೆಲೆಗಳು, ಆಸ್ತಿಪಾಸ್ತಿಗಳಿಗೆ ರಕ್ಷಣೆ ನೀಡಲಿವೆ’ ಎಂದು ಹೇಳಿದೆ. ‘ಟೈಗರ್‌ಶಾರ್ಕ್ಸ್‌’ ಪಡೆ ಭಾರತದ ಸಶಸ್ತ್ರಪಡೆಗಳಿಗೆ 1969ರಲ್ಲಿ ಅಂಬಾಲಾದಲ್ಲಿ ಸೇರಿಕೊಂಡಿತ್ತು.

ಭಾರತ-ಪಾಕ್‌ ಯುದ್ಧ ವಿಮಾನ ಮುಖಾಮುಖಿ: ಪಂಜಾಬ್‌ ಗಡಿಯಲ್ಲಿ ಆತಂಕಕಾರಿ ಘಟನೆ

ಸುಖೋಯ್‌-30 ಎಂಕೆಐಗೆ ಬ್ರಹ್ಮೋಸ್‌ ಅಳವಡಿಸಿ, ಅದರ ಮಾರ್ಪಡಿಸುವಿಕೆಯನ್ನು ಸಂಪೂರ್ಣ ದೇಶೀಯವಾಗಿ ಮಾಡಲಾಗಿದೆ. ಬ್ರಹ್ಮೋಸ್‌ ಏರೋಸ್ಪೇಸ್‌, ಬೆಂಗಳೂರಿನ ಎಚ್‌ಎಎಲ್‌ ಹಾಗೂ ವಾಯುಪಡೆಗಳು ಜಂಟಿಯಗಿ ಈ ಪ್ರಕ್ರಿಯೆ ನಡೆಸಿವೆ ಎಂದು ವಾಯುಪಡೆ ಮುಖ್ಯಸ್ಥ ರಾಕೇಶ್‌ ಭದೌರಿಯಾ ಹೇಳಿದ್ದಾರೆ.

ವಾಯುಪಡೆಯ 2018ರ ‘ಗಗನಶಕ್ತಿ’ ತಾಲೀಮಿನ ವೇಳೆ ಸುಖೋಯ್‌-30 ಎಂಕೆಐ ಯುದ್ಧವಿಮಾನಗಳ ಶಕ್ತಿ ಪ್ರದರ್ಶನ ನಡೆದಿತ್ತು. ಆಗಸದಲ್ಲಿ ಹಾರಾಡುವಾಗಲೇ ಇದಕ್ಕೆ ಇಂಧನ ಪೂರೈಕೆ ವಿಮಾನವಾದ ‘ಐಎಲ್‌-78’ರ ಮೂಲಕ ಇಂಧನ ತುಂಬುವ ತಾಲೀಮನ್ನೂ ಪ್ರದರ್ಶಿಸಲಾಗಿತ್ತು.

ಗಡಿಯೊಳಗೆ ನುಸುಳಿದ ಮತ್ತೊಂದು ಪಾಕ್ ಡ್ರೋಣ್, ಅಟ್ಟಾಡಿಸಿದ ಭಾರತೀಯ ಸೇನೆ

ಮುಖ್ಯಾಂಶಗಳು

- ಬ್ರಹ್ಮೋಸ್‌ ಸಜ್ಜಿತ ಸುಖೋಯ್‌-30 ಯುದ್ಧವಿಮಾನದಿಂದ ರಕ್ಷಣಾ ಕಾರ್ಯ, ಅಗತ್ಯ ಬಿದ್ದರೆ ದಾಳಿ

- ರಷ್ಯಾ ಸಹಭಾಗಿತ್ವದಲ್ಲಿ ಸಿದ್ಧಪಡಿಸಲಾಗಿರುವ ಬ್ರಹ್ಮೋಸ್‌ ಕ್ಷಿಪಣಿ ಪರೀಕ್ಷೆ ಈಗಾಗಲೇ ಯಶಸ್ವಿ

- ಬ್ರಹ್ಮೋಸ್‌ ಕ್ಷಿಪಣಿಗೆ ಭೂಮಿ ಮತ್ತು ಸಮುದ್ರದ ಮೇಲಿನ ಗುರಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ

- ಸುಖೋಯ್‌ಗೆ ಬ್ರಹ್ಮೋಸ್‌ ಅಳವಡಿಸಿರುವ ಕಾರಣ ವಾಯುಪಡೆಗೆ ಭೂಮಿ ಅಥವಾ ಸಮುದ್ರದ ಮೇಲಿನ ಯಾವುದೇ ಗುರಿಗಳ ಮೇಲೆ ದಾಳಿ ನಡೆಸುವ ಶಕ್ತಿ ಪ್ರಾಪ್ತಿ

- ಹಗಲು-ರಾತ್ರಿಯೆನ್ನದೇ ಯಾವುದೇ ಹವಾಮಾನದ ಸಂದರ್ಭದಲ್ಲೂ ಇವುಗಳಿಗೆ ದಾಳಿ ಮಾಡುವ ತಾಕತ್ತು

- ಸುಖೋಯ್‌ಗೆ ಬ್ರಹ್ಮೋಸ್‌ ಅಳವಡಿಕೆಯಲ್ಲಿ ಬೆಂಗಳೂರಿನ ಎಚ್‌ಎಎಲ್‌ ಪಾತ್ರ ಹಿರಿದು