ಬೆಂಗಳೂರಿನ ಆಗಸದಲ್ಲಿ ತೇಜಸ್ Mk1 ಯುದ್ಧ ವಿಮಾನ ಹಾರಿಸಿದ IAF ಮುಖ್ಯಸ್ಥ!
* ಬೆಂಗಳೂರಿಗೆ ಭೇಟಿ ಕೊಟ್ಟ ಭಾರತೀಯ ವಾಯುಪಡೆ ಮುಖ್ಯಸ್ಥ ಆರ್ ಕೆ ಎಸ್ ಭದೌರಿಯಾ
* ತೇಜಸ್ ಎಂಕೆ 1 ವಿಮಾನವನ್ನು ಬೆಂಗಳೂರಿನಲ್ಲಿ ಹಾರಿಸಿದ ಭದೌರಿಯಾ
ಬೆಂಗಳೂರು(ಆ.25): ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಬುಧವಾರ ಸ್ವದೇಶೀ ನಿರ್ಮಿತ ಲಘು ಯುದ್ಧ ವಿಮಾನ, ತೇಜಸ್ ಎಂಕೆ 1 ವಿಮಾನದಲ್ಲಿ ಬೆಂಗಳೂರಿನಲ್ಲಿ ಹಾರಾಟ ನಡೆಸಿದ್ದಾರೆ.'
ಏರ್‌ಕ್ರಾಫ್ಟ್ ಮತ್ತು ಸಿಸ್ಟಮ್ಸ್ ಪರೀಕ್ಷಾ ಸಂಸ್ಥೆಯಲ್ಲಿ ನಡೆಯುತ್ತಿರುವ ಯೋಜನೆಗಳು ಮತ್ತು ಕಾರ್ಯಾಚರಣೆಯ ಪ್ರಯೋಗಗಳ ಪ್ರಗತಿ ಪರಿಶೀಲಿಸಲು ವಾಯುಪಡೆಯ ಮುಖ್ಯಸ್ಥ ಭದೌರಿಯಾ ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಆರಂಭಿಕ ಕಾರ್ಯಾಚರಣೆಯ ಕ್ಲಿಯರೆನ್ಸ್ , ಐಒಸಿ ಹೊಂದಿರುವ ವಿಮಾನವನ್ನು ಹಾರಿಸಿದ್ದಾರೆ. IOC ಹಾಗೂ FOC ಹೀಗೆ ಎರಡು ಮಾನದಂಡಳಿರುವ LCA ತೇಜಸ್ ವಿಮಾನಗಳಿವೆ. ಇವುಗಳಲ್ಲಿ ತೇಜಸ್ ಎಫ್‌ಒಸಿ ಹೆಚ್ಚು ಸುಧಾರಿತ ಮತ್ತು ಅಭಿವೃದ್ಧಿ ಹೊಂದಿದ ಆವೃತ್ತಿಯಾಗಿದೆ. ಐಒಸಿ ಮಾನದಂಡವು ಸೀಮಿತ ಶ್ರೇಣಿ ಮತ್ತು ಇಂಧನ ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಈ ಭೇಟಿ ವೇಳೆ ಭದೌರಿಯಾರವರು ತೇಜಸ್ ಹಗುರ ಯುದ್ಧ ವಿಮಾನದ ಆರಂಭಿಕ ಕಾರ್ಯಾಚರಣೆ ಅನುಮೋದನಾ ಕೇಂದ್ರಕ್ಕೂ ಭೇಟಿ ನೀಡಿದ್ದರೆನ್ನಲಾಗಿದೆ. ಪ್ರಸ್ತುತ, ತೇಜಸ್ 1,200 ಮತ್ತು 800-ಲೀಟರ್ ಸಾಮರ್ಥ್ಯದ ಎರಡು ಸ್ಥಿರ ಟ್ಯಾಂಕ್‌ಗಳನ್ನು ಒಯ್ಯಬಹುದು. ಆದರೆ FOC- ಆವೃತ್ತಿಯು 725-ಲೀಟರ್ ಸಾಮರ್ಥ್ಯದೊಂದಿಗೆ ಹೆಚ್ಚುವರಿ ಟ್ಯಾಂಕ್ ಹೊಂದಿದೆ.
ಭಾರತೀಯ ವಾಯುಪಡೆಯ ಅಧಿಕೃತ ಟ್ವಿಟರ್ ಖಾತೆ ಯಲ್ಲಿ ಮುಖ್ಯಸ್ಥರ ಈ ಭೇಟಿಯ ಫೋಟೋಗಳನ್ನು ಟ್ವೀಟ್ ಮಾಡಲಾಗಿದೆ. ತೇಜಸ್ ಎಂಕೆ 1 ವಿಮಾನದಲ್ಲಿ ಹಾರಾಟ ನಡೆಸಿದ ಹಾಗೂ ಏರ್ ಕ್ರಾಫ್ಟ್ ಮತ್ತು ಸಿಸ್ಟಮ್ಸ್ ಟೆಸ್ಟಿಂಗ್ ಇನ್ಸ್ಟಾಬ್ಲಿಷ್ಮೆಂಟ್ (ASTE) ಗೆ ಭೇಟಿ ನೀಡಿದಾಗ, ಅಲ್ಲಿ ನಡೆಯುತ್ತಿರುವ ಯೋಜನೆಗಳ ಅವಲೋಕನ ನಡೆಸಿ ಕಾರ್ಯಾಚರಣೆಯ ಪ್ರಯೋಗಗಳ ಪ್ರಗತಿಯ ವಿವರ ಪಡೆದಿರುವ ಬಗ್ಗೆಯೂ ಇಲ್ಲಿ ಉಲ್ಲೇಖಿಸಲಾಗಿದೆ.