ಕೊಟ್ಟಾಯಂ[ಮಾ.15]: ಕೊರೋನಾ ಸೋಂಕಿ ತಗುಲಿರುವ ಶಂಕೆಯಿಂದಾಗಿ ಇಲ್ಲಿನ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಾಗಿದ್ದ ಯುವಕನೊಬ್ಬ ತನ್ನ ತಂದೆಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಾಗದೇ ವಿಡಿಯೋ ಕಾಲ್‌ ಮೂಲಕವೇ ತಂದೆಯ ಅಂತಿಮ ವಿಧಿ ವಿಧಾನವನ್ನು ನೋಡಿದ ಹೃದಯ ತಟ್ಟುವ ಘಟನೆ ಕೇರಳದಲ್ಲಿ ನಡೆದಿದೆ.

ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ತಂದೆಯನ್ನು ನೋಡಲು, 30 ವರ್ಷದ ಲಿನೋ ಅಬೆಲ್‌ ಎಂಬವರು ಮಾರ್ಚ್ 8 ರಂದು ಕತಾರ್‌ನಿಂದ ಮರಳಿದ್ದರು. ಈ ವೇಳೆ ಅವರಲ್ಲಿ ಕೆಮ್ಮು ಕಾಣಿಸಿಕೊಂಡಿತ್ತು. ಹಾಗಾಗಿ ಖುದ್ದು ಅವರೇ ತಮ್ಮ ತಂದೆಯಿದ್ದ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ನಲ್ಲಿ ದಾಖಲಾಗಿದ್ದರು. ಏತನ್ಮಧ್ಯೆ ಅವರ ತಂದೆ ಮೃತ ಪಟ್ಟಿದ್ದಾರೆ.

'ತಂಗಿ ಶವದೊಂದಿಗೆ 2 ದಿನದಿಂದ ಮನೆಯಲ್ಲಿದ್ದೇನೆ, ಏನು ಮಾಡ್ಬೇಕಂತ ತಿಳೀತಿಲ್ಲ!'

ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಲಾಗಿದ್ದರಿಂದ ಅವರನ್ನು ತಂದೆಯ ಅಂತಿಮ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಹಾಗಾಗಿ ಆಸ್ಪತ್ರೆಯಿಂದ ತಂದೆಯ ಮೃತದೇಹವನ್ನು ತೆಗೆದುಕೊಂಡು ಹೋಗುವುದನ್ನು ಕಿಟಕಿ ಮೂಲಕ ನೋಡಿದ್ದರು. ಅಂತಿಮ ವಿಧಿ ವಿಧಾನಗಳನ್ನು ವಿಡಿಯೋ ಕಾಲ್‌ ಮುಖಾಂತರ ವೀಕ್ಷಿಸಿದ್ದರು. ಈ ವಿಚಾರವನ್ನು ಖುದ್ದು ಅವರೇ ಫೇಸ್ಬುಕ್‌ನಲ್ಲಿ ಬರೆದುಕೊಂಡಿದ್ದು, ನೆಟ್ಟಿಗರು ಕಣ್ಣೀರಾಗಿದ್ದಾರೆ.