ಕೋಲ್ಕತಾ ವೈದ್ಯೆ ಪ್ರಕರಣದ ಕುರಿತು ಸೆಲ್ಡಾ ಜಿಲ್ಲಾ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಆದರೆ ಈ ತೀರ್ಪು ಓದುತ್ತಿದ್ದಂತೆ ಸಂಜಯ್ ರಾಯ್ ಕೋರ್ಟ್‌ನಲ್ಲಿ, ನಾನು ರುದ್ರಾಕ್ಷಿ ಧರಿಸುತ್ತೇನೆ ಎಂದಿದ್ಯಾಕೆ?
ಕೋಲ್ಕತಾ(ಜ.18) ಕೋಲ್ಕತಾ ವೈದ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ. ಅತ್ಯಂತ ಭೀಕರ ಘಟನೆ ದೇಶದಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಸುರಕ್ಷತೆಯನ್ನೇ ಪ್ರಶ್ನೆ ಮಾಡಿತ್ತು. ಈ ಪ್ರಕರಣದ ಕುರಿತು ಸ್ಥಳೀಯ ಜಿಲ್ಲಾ ನ್ಯಾಯಾಲ ತೀರ್ಪು ಪ್ರಕಟಿಸಿದೆ. ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆ ಪ್ರಮಾಣವನ್ನು ಸೋಮವಾರ ಪ್ರಕಟಿಸವುದಾಗಿ ಹೇಳಿದೆ. ಆದರೆ ಈ ತೀರ್ಪನ್ನು ನ್ಯಾಯಾಧೀಶರು ಓದುತ್ತಿರುವಂತೆ ಆರೋಪಿ ಸಂಜಯ್ ರಾಯ್ ನಾನು ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸುತ್ತೇನೆ ಎಂದಿದ್ದಾನೆ. ಸಂಜಯ್ ರಾಯ್ ದಿಢೀರ್ ರುದ್ರಾಕ್ಷಿ ಮಾಲೆ ವಿಚಾರವನ್ನು ಕೋರ್ಟ್‌ನಲ್ಲಿ ಹೇಳಿದ್ದೇಕೆ ಅನ್ನೋದಕ್ಕೂ ಉತ್ತರ ಸಿಕ್ಕಿದೆ.
ಆರ್‌ಜಿ ಕರ್ ಮೆಡಿಲ್ ಕಾಲೇಜು ಹಾಗೂ ಆಸ್ಪ್ರೆಯಲ್ಲಿ ನಡೆದ ವೈದ್ಯೆ ಪ್ರಕರಣದಲ್ಲಿ ಆರೋಪಿ ಸಂಜಯ್ ರಾಯ್ ತಪ್ಪಿತಸ್ಥ ಎಂದು ತೀರ್ಪು ನೀಡಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 64, ಸೆಕ್ಷನ್ 66, ಸೆಕ್ಷನ್ 103(1) ಅಡಿಯಲ್ಲಿ ತಪ್ಪಿತಸ್ಥ ಅನ್ನೋದು ಕೋರ್ಟ್ ತೀರ್ಪು ನೀಡಿದೆ. ಇದೀಗ ಅಜೀವ ಪರ್ಯಂತ ಜೈಲು ಶಿಕ್ಷೆ ಅಥವಾ ಗಲ್ಲುಶಿಕ್ಷೆಗೂ ಗುರಿಯಾಗುವ ಸಾಧ್ಯತೆ ಇದೆ. ತೀರ್ಪು ಪ್ರಕಟಿಸುತ್ತಿದ್ದಂತೆ ಸಂಜಯ್ ರಾಯ್ ವಿಚಲಿತರಾಗಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಕೊರಳಲ್ಲಿ ರುದ್ರಾಕ್ಷಿ ಮಾಲೆ ಧರಿಸುತ್ತೇನೆ. ನಾನು ಈ ತಪ್ಪು ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ನನ್ನ ವಾದವನ್ನು ಆಲಿಸಿಕೊಳ್ಳಬೇಕು ಎಂದು ಸಂಜಯ್ ರಾಯ್ ಮನವಿ ಮಾಡಿದ್ದಾರೆ.
ಕೋಲ್ಕತ್ತಾ ವೈದ್ಯೆಯ ರೇಪ್ & ಮರ್ಡರ್ ಕೇಸ್: ಸಂಜಯ್ ರಾಯ್ ದೋಷಿ ಎಂದ ಕೋರ್ಟ್, 20ಕ್ಕೆ ಶಿಕ್ಷೆ ಪ್ರಮಾಣ ಪ್ರಕಟ
ಈ ಪ್ರಕರಣದಲ್ಲಿ ನನ್ನನ್ನು ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ. ಐಪಿಎಸ್ ಅಧಿಕಾರಿ ಹೇಳಿದಂತೆ, ಸೂಚಿಸಿದಂತೆ ನಾನು ಹೇಳಿಕೆ ನೀಡಿದ್ದೇನೆ. ನಾನು ಕೊರಳಲ್ಲಿ ರುದ್ರಾಕ್ಷ ಧರಿಸುತ್ತೇನೆ. ಈ ಕೃತ್ಯ ನಾನು ಎಸಗಿದ್ದರೆ, ಕೊರಳಿನಿಂದ ರುದ್ರಾಕ್ಷ ಕೆಳಗೆ ಬೀಳಬೇಕಿತ್ತು. ಅಥವಾ ರುದ್ರಾಕ್ಷಗಳು ಘಟನೆ ನೆಡೆದ ಸ್ಥಳದಲ್ಲಿ ಸಿಗಬೇಕಿತ್ತು. ಉದ್ದೇಶಪೂರ್ವಕಾಗಿ ಪ್ರಕರಣದಲ್ಲಿ ಸಿಲುಕಿಸಿ ನೈಜ ಆರೋಪಿಯನ್ನು ಮೆರೆ ಮಾಚಲಾಗಿದೆ ಎಂದು ಸಂಜಯ್ ರಾವ್ ಹೇಳಿದ್ದಾರೆ. ಆದರೆ ಜಡ್ಜ್ ಈ ಮಾತುಗಳಿಂದ ಪ್ರೇರಿತರಾಗಿಲ್ಲ. ಎಲ್ಲಾ ಸಾಕ್ಷ್ಯಗಳು ನಿಮ್ಮ ವಿರುದ್ಧಿದೆ. ನಿಮ್ಮ ವಾದವನ್ನು ಸೋಮವಾರ ಕೋರ್ಟ್ ಕೇಳಿಸಿಕೊಳ್ಳಲಿದೆ. ಬಳಿಕ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.
ತೀರ್ಪು ಪ್ರಕಟಿಸುತ್ತಿದ್ದಂತೆ ಸಂಜಯ್ ರಾಯ್ ಆಕ್ರೋಶಗೊಂಡಿದ್ದಾರೆ. ಕೋರ್ಟ್ ಹಾಲ್‌ನಲ್ಲೇ ನಿಯಂತ್ರಣ ಕಳೆದುಕೊಳ್ಳುವ ರೀತಿ ವರ್ತಿಸಿದ್ದಾರೆ. ತೀರ್ಪು ಪ್ರಕಟಿಸಿ, ಸಂಜಯ್ ರಾಯ್ ತನ್ನ ವಾದ ಮಂಡಿಸುವ ಮಾತುಗಳನ್ನು ಕೇಳಿಸಿಕೊಂಡ ಕೋರ್ಟ್ ಬಳಿಕ ಜೈಲಿಗೆ ಕರೆದುಕೊಂಡು ಹೋಗುವಂತೆ ಸೂಚಿಸಿದೆ. ಭಾರಿ ಭದ್ರತೆಯೊಂದಿಗೆ ಸಂಜಯ್ ರಾಯ್‌ನನ್ನು ಜೈಲಿಗೆ ಸ್ಥಳಾಂತರಿಸಲಾಗಿದೆ. ಇದೀಗ ಸೋಮವಾರ ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ತೀರ್ಪಿನ ವಿರುದ್ದ ಸಂಜಯ್ ರಾಯ್ ಹೈಕೋರ್ಟ್ ಕದ ತಟ್ಟಲಿದ್ದಾರೆ. ಆದರೆ ಸೋಮವಾರ ಸಂಜಯ್ ರಾಯ್ ವಾದವನ್ನು ಕೋರ್ಟ್ ಕೇಳಿಸಿಕೊಳ್ಳಲಿದೆ. ಈ ವಾದದಲ್ಲಿ ಕೆಲ ಸ್ಫೋಟಕ ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
