* ಹಸಿವಿನಿಂದ ಕಂಗಾಲಾದ ಮಕ್ಕಳ ಪಾಲಿಗೆ ಬಂಧುವಾದ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್* ಊಟಕ್ಕಾಗಿ ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗೆ ತನ್ನ ಊಟ ಕೊಟ್ಟ ಮಹೇಶ್* ವೈರಲ್ ಆಯ್ತು ವಿಡಿಯೋ

ಹೈದರಾಬಾದ್(ಮೇ.20): 

ಹೈದರಾಬಾದ್‌ನ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ತನ್ನ ಊಟದ ಬುತ್ತಿಯನ್ನು ನಿರ್ಗತಿಕ ಮಕ್ಕಳಿಗೆ ಕೊಟ್ಟು, ಅವರ ಹಸಿವು ನೀಗಿಸಿದ ಘಟನೆ ಸದ್ಯ ಎಲ್ಲರ ಮನ ಗೆದ್ದಿದೆ. ಈ ಪೊಲೀಸ್‌ ಪೇದೆಯ ಫೋಟೋ ಬಾರೀ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಹೃದಯವಂತಿಕೆಗೆ ಸೆಲ್ಯಟೂ ಎಂದಿದ್ದಾರೆ. ತೆಲಂಗಾಣ ರಾಜ್ಯ ಪೊಲೀಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಲಾಗಿದ್ದು, ಸದ್ಯ ಭಾರೀ ವೈರಲ್ ಆಗುತ್ತಿದೆ. 

Scroll to load tweet…

ಈ ಘಟನೆ ನಡೆದಿದ್ದು ಹೈದರಾಬಾದ್‌ನ ಪಂಜಾಗುಟ್ಟಾದಲ್ಲಿ. ಇಲ್ಲಿನ ಟ್ರಾಫಿಕ್ ಪೊಲೀಸ್‌ ಇಲಾಖೆಯ ಕನ್ಸ್ಟೇಬಲ್ ಮಹೇಶ್ ಕರ್ತವ್ಯದಲ್ಲಿದ್ದರು. ಹೀಗಿರುವಾಗ ಪುಟ್ಟ, ಪುಟ್ಟ ಮಕ್ಕಳು ಹಸಿವಿನಿಂದ ಸಿಕ್ಕ ಸಿಕ್ಕವರಲ್ಲಿ ಊಟ ಕೊಡಿ ಎಂದು ಭಿಕ್ಷೆ ಬೇಡುತ್ತಿದ್ದರು. ಇದನ್ನು ನೋಡಿದ ಮಹೇಶ್ ಕೂಡಲೇ ತಮ್ಮ ಊಟದ ಬಾಕ್ಸ್‌ ಆ ಮಕ್ಕಳಿಗೆ ನೀಡಿದ್ದಾರೆ.

ವಿಡಿಯೋದಲ್ಲಿ ಮಹೇಶ್ ಎಲ್ಲಕ್ಕಿಂತ ಮೊದಲು ಮಕ್ಕಳಿಗೆ ಎರಡು ಪೇಪರ್ ಪ್ಲೇಟ್ ನೀಡುತ್ತಾರೆ. ಬಳಿಕ ತನ್ನ ಲಂಚ್ ಬಾಕ್ಸ್‌ನಿಂದ ಮಕ್ಕಳಿಗೆ ಅನ್ನ, ಸಾರು ಹಾಗೂ ಚಿಕನ್ ಫ್ರೈ ಬಡಿಸಿದ್ದಾರೆ. ಬಳಿಕ ಮಕ್ಕಳಿಗೆ ತಿನ್ನುವಂತೆ ಹೇಳಿದ್ದಾರೆ. ಇದನ್ನು ಕಂಡು ಖುಷಿಯಾದ ಮಕ್ಕಳು ತಿನ್ನಲಾರಂಭಿಸಿರುವ ದೃಶ್ಯಗಳಿವೆ.

ಈ ವಿಡಿಯೋ ಶೇರ್ ಮಾಡಿಕೊಂಡಿರುವ ತೆಲಂಗಾಣ ರಾಜ್ಯ ಪೊಲೀಸರು '#ActOfKindness ಪಂಜಾಗುಟ್ಟಾದ ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್ ಮಹೇಶ್ ಪೆಟ್ರೋಲಿಂಗ್ ಡ್ಯೂಟಿ ಮಾಡುತ್ತಿದ್ದ ವೇಳೆ ಇಬ್ಬರು ಮಕ್ಕಳು ರಸ್ತೆ ಬದಿಯಲ್ಲಿ ಹಸಿವಿನಿಂದ ಭಿಕ್ಷೆ ಬೇಡುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ತನ್ನ ಊಟದ ಬಾಕ್ಸ್ ತರಿಸಿ ಆ ಮಕ್ಕಳಿಗೆ ಊಟ ನೀಡಿದ್ದಾರೆ' ಎಂದು ಬರೆದಿದ್ದಾರೆ.

ವೈರಲ್ ಆದ ಈ ವಿಡಿಯೋ ಜನರ ಮನ ಗೆದ್ದಿದೆ. ತಮ್ಮವರಿಗೇ ಸಹಾಯ ಮಾಡಲು ಹಿಂದೇಟು ಹಾಕುವ ಈ ಸಂದರ್ಭದಲ್ಲಿ ನಿರ್ಗತಿಕ ಮಕ್ಕಳ ಹಸಿವು ನೀಗಿಸಿದ ಪೊಲೀಸಪ್ಪನ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.