20 ವರ್ಷದ ಯುವಕನ ಅತೀವೇಗದ ಚಾಲನೆಗೆ ಸೆಕ್ಯೂರಿಟಿ ಗಾರ್ಡ್ ಬಲಿ : ಸಿಸಿಟಿವಿಯಲ್ಲಿ ದೃಶ್ಯ ಸೆರೆ
20 ವರ್ಷದ ಯುವಕನೋರ್ವನ ಅತೀ ವೇಗದ ಕಾರು ಚಾಲನೆಗೆ ಪಾದಚಾರಿ ಸೆಕ್ಯೂರಿಟಿ ಗಾರ್ಡ್ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ.
ಹೈದರಾಬಾದ್: ಅತೀ ವೇಗ ತಿಥಿ ಬೇಗ ಅಂತ ಟ್ರಾಫಿಕ್ ಪೊಲೀಸರು ಅಲ್ಲಲ್ಲಿ ಬೋರ್ಡ್ ಹಾಕುವ ಮೂಲಕ ಸಂಚಾರ ಜಾಗೃತಿ ಮೂಡಿಸುತ್ತಲೇ ಇದ್ದರೂ ಇಲ್ಲೊಬ್ಬ ಯುವಕನ ಅತೀವೇಗದ ಚಾಲನೆಗೆ ಇನ್ಯಾರದ್ದೋ ತಿಥಿ ಮಾಡುವಂತಾಗಿದೆ. 20 ವರ್ಷದ ಯುವಕನೋರ್ವನ ಅತೀ ವೇಗದ ಕಾರು ಚಾಲನೆಗೆ ಪಾದಚಾರಿ ಸೆಕ್ಯೂರಿಟಿ ಗಾರ್ಡ್ ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಮೂಡಿಸುತ್ತಿದೆ.
ಹೈದರಾಬಾದ್‌ನ ಜೆಡ್ಡಿಮೆಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಕುತುಬುಲ್ಲಾಪುರ್ ಸಮೀಪದ ಗಜುಲಾ ರಾಮರಾಮ್ ಎಂಬಲ್ಲಿ ಈ ಘಟನೆ ನಡೆದಿದೆ. ಈ ಕಾರನ್ನು 20 ವರ್ಷದ ವಿದ್ಯಾರ್ಥಿಯೋರ್ವ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಬಂದ ಯುವಕ ಸೀದಾ ಬಂದು ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಒಬ್ಬರಿಗೆ ಗುದ್ದಿದ್ದಾನೆ. ರಸ್ತೆ ಬದಿ ನಡೆದು ಹೋಗುತ್ತಿದ್ದ ಅವರು ಕಾರು ಡಿಕ್ಕಿ ಹೊಡೆದ ರಭಸಕ್ಕೆ 6 ರಿಂದ 7 ಅಡಿ ಯಷ್ಟು ಎತ್ತರಕ್ಕೆ ಹಾರಿ ಕಂಪೌಂಡ್ ಒಳಗೆ ಬಂದು ಬಿದ್ದಿದ್ದಾರೆ. ಅಲ್ಲದೇ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಾರು ಇವರಿಗೆ ಡಿಕ್ಕಿ ಹೊಡೆದ ನಂತರ ಸಮೀಪದ ಗೇಟ್‌ಗೂ ಡಿಕ್ಕಿ ಹೊಡೆದು ನಿಂತಿದೆ.
ಕೋಲಾರ: ಮರಕ್ಕೆ ಡಿಕ್ಕಿ ಹೊಡೆದ ಆಡಿ ಕಾರು, ಸ್ಥಳದಲ್ಲೇ ಮೂವರು ವಿದ್ಯಾರ್ಥಿಗಳ ದುರ್ಮರಣ
ಕಾರಿನ ವೇಗ ಎಷ್ಟು ತೀವ್ರವಾಗಿತ್ತೆಂದರೆ ಸಮೀಪದಲ್ಲಿರುವ ಕರೆಂಟ್ ಕಂಬಕ್ಕೆ ಆಧಾರವಾಗಿದ್ದ ಮತ್ತೊಂದು ಕಂಬ ಕೂಡ ತುಂಡಾಗಿದೆ. ಅದರ ಜೊತೆ ಕರೆಂಟ್ ಕಂಬವೂ ಕೂಡ ಅಲುಗಾಡಿ ಕರೆಂಟ್ ವಯರ್‌ಗಳೆಲ್ಲವೂ ತೂಗಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೇ ವೇಳೆ ಸಮೀಪದಲ್ಲಿ ಇದ್ದವರೆಲ್ಲರೂ ಕಾರಿನ ಬಳಿ ಓಡಿ ಬಂದಿದ್ದು, ಕಾರು ಚಾಲಕ ಅಲ್ಲಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಹೀಗೆ ವೇಗವಾಗಿ ಕಾರು ಚಾಲನೆ ಮಾಡಿ ಒಬ್ಬನ ಸಾವಿಗೆ ಕಾರಣನಾದ ಯುವಕನನ್ನು 20 ವರ್ಷ ಮನೀಷ್ ಗೌಡ್ ಎಂದು ಗುರುತಿಸಲಾಗಿದೆ. ಡಿಗ್ರಿ ಓದುತ್ತಿದ್ದ ಈತ ತನ್ನ ಐವರು ಸ್ನೇಹಿತರೊಂದಿಗೆ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಘಟನೆಯಲ್ಲಿ ಆತನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಹಾಗೆಯೇ ಈ ದುರಂತದಲ್ಲಿ ಸಾವನ್ನಪ್ಪಿದ್ದ ವ್ಯಕ್ತಿಯನ್ನು ಗೋಪಿ ಎಂದು ಗುರುತಿಸಲಾಗಿದ್ದು, ಸೆಕ್ಯೂರಿಟಿ ಗಾರ್ಡ್ ಆಗಿ ಅವರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಪೊರ್ಶೆ ಕಾರು ಅಪಘಾತದ ಬೆನ್ನಲ್ಲೇ ಅಪ್ರಾಪ್ತ ಬಾಲಕನ ಬೈಕ್ ರೈಡ್‌ಗೆ 32ರ ಹರೆಯದ ವ್ಯಕ್ತಿ ಬಲಿ!