Asianet Suvarna News Asianet Suvarna News

ಬೆಂಗಳೂರಿಗೆ ಮಿಸ್ ಆಯ್ತು ಪಟ್ಟ : ಡೈನಾಮಿಕ್‌ ಸಿಟಿ ನಂ.2!

ಮೋಸ್ಟ್ ಡೈನಾಮಿಕ್ ಸಿಟಿಗಳಲ್ಲಿ ಬೆಂಗಳೂರು ಎರಡನೇ ಸ್ಥಾನಕ್ಕೆ ಈ ಬಾರಿ ತೃಪ್ತಿ ಪಟ್ಟುಕೊಂಡಿದೆ. ಹೈದ್ರಾಬಾದ್ ಮೊದಲ ಸ್ಥಾನ ಅಲಂಕರಿಸಿದೆ. 

Hyderabad most dynamic city Bengaluru  ranked second
Author
Bengaluru, First Published Jan 19, 2020, 7:54 AM IST
  • Facebook
  • Twitter
  • Whatsapp

ನವದೆಹಲಿ [ಜ.19]:  ವಿಶ್ವದ ಹಲವು ಪ್ರಸಿದ್ಧ ನಗರಗಳನ್ನು ಹಿಂದಿಕ್ಕಿರುವ ಕರ್ನಾಟಕದ ಮಾಹಿತಿ ತಂತ್ರಜ್ಞಾನ ರಾಜಧಾನಿ ಬೆಂಗಳೂರು, ಜಗತ್ತಿನ ಡೈನಾಮಿಕ್‌ (ಚಲನಶೀಲ) ನಗರಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡು ಗಮನ ಸೆಳೆದಿದೆ.

ರಿಯಲ್‌ ಎಸ್ಟೇಟ್‌ ಸಲಹಾ ಸಂಸ್ಥೆ ‘ಜೆಎಲ್‌ಎಲ್‌’ ಪ್ರತಿ ವರ್ಷದಂತೆ ಈ ಸಲವೂ ವಿಶ್ವದ 130 ನಗರಗಳಲ್ಲಿ ಸಮೀಕ್ಷೆ ನಡೆಸಿ, ಡೈನಾಮಿಕ್‌ ಸಿಟಿಗಳ ‘ಸಿಟಿ ಮೊಮೆಂಟಂ ಸೂಚ್ಯಂಕ’ವನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಪೈಕಿ ಟಾಪ್‌ 20ರಲ್ಲಿ ಭಾರತದ 7 ನಗರಗಳು ಸ್ಥಾನ ಪಡೆದಿವೆ. ಇದರಲ್ಲಿ ಬೆಂಗಳೂರು 2ನೇ ಸ್ಥಾನದಲ್ಲಿದ್ದರೆ, ಹೈದರಾಬಾದ್‌ ಪ್ರಥಮ ಸ್ಥಾನ ಮುಡಿಗೇರಿಸಿಕೊಂಡಿದೆ. ಚೆನ್ನೈ 5, ದಿಲ್ಲಿ 6, ಪುಣೆ 12, ಕೋಲ್ಕತಾ 15 ಹಾಗೂ ಮುಂಬೈ 20ನೇ ಸ್ಥಾನದಲ್ಲಿವೆ. ಆರ್ಥಿಕ ಹಿಂಜರಿತದ ಭೀತಿಯ ನಡುವೆಯೂ ಭಾರತದ ನಗರಗಳು ಉತ್ತಮ ಸಾಧನೆ ಮಾಡಿವೆ ಎಂದು ಜೆಎಲ್‌ಎಲ್‌ ಶ್ಲಾಘಿಸಿದೆ.

ಬೆಂಗಳೂರು 2019ರಲ್ಲಿ ಮೊದಲ ಸ್ಥಾನದಲ್ಲಿತ್ತು. ಈ ಸಲ 2ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಬಾರಿ 2ನೇ ಸ್ಥಾನದಲ್ಲಿದ್ದ ಹೈದರಾಬಾದ್‌ ಈ ಸಲ ಮೊದಲ ಸ್ಥಾನಕ್ಕೆ ಜಿಗಿದಿದೆ. ಅದೇ ರೀತಿ 2017ರಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದಿತ್ತು. 2018ರಲ್ಲಿ 2ನೇ ಸ್ಥಾನಕ್ಕೆ ಕುಸಿದು ಹೈದರಾಬಾದ್‌ಗೆ ಮೊದಲ ಸ್ಥಾನ ಬಿಟ್ಟುಕೊಟ್ಟಿತ್ತು. ಒಟ್ಟಿನಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ ನಡುವೆ ಈ ವಿಷಯದಲ್ಲಿ ಪೈಪೋಟಿ ಇರುವುದು ಸ್ಪಷ್ಟವಾಗಿದೆ.

ಮಾನದಂಡ:

ಬಂಡವಾಳ ಹೂಡಿಕೆ, ಮೂಲಸೌಕರ್ಯ ಅಭಿವೃದ್ಧಿ, ಪ್ರತಿಭಾವಂತರ ಲಭ್ಯತೆ, ಪರಿಸರ ಮಾಲಿನ್ಯ ತಗ್ಗಿಸಲು ಆಧುನಿಕ ಶೈಲಿಯ ವಾಹನಗಳು ಹಾಗೂ ತಾಂತ್ರಿಕತೆಯ ಬಳಕೆ, ತಂತ್ರಜ್ಞಾನ ಅಭಿವೃದ್ಧಿ, ಜಿಡಿಪಿ ಬೆಳವಣಿಗೆ ದರ, ರೀಟೇಲ್‌ (ಚಿಲ್ಲರೆ) ಮಾರಾಟ ಹಾಗೂ ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರ ಸಂಖ್ಯೆ ವೃದ್ಧಿ ಇತ್ಯಾದಿಗಳನ್ನು ಪರಿಗಣಿಸಿ ‘ಡೈನಾಮಿಕ್‌ ಸಿಟಿ’ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.

ಮಾಲಿಕರಿಂದಲೇ ಅಕ್ರಮ ವಲಸಿಗರಿಗೆ ಗೇಟ್‌ಪಾಸ್‌!, ಜೋಪಡಿಗಳು ತೆರವು, ಊರು ಖಾಲಿ!...

‘ವಿದೇಶೀ ಹೂಡಿಕೆದಾರರು ಈ ನಗರಗಳ ಮೇಲೆ ಎಷ್ಟುಆಸಕ್ತಿ ತೋರುತ್ತಾರೆ ಎಂಬುದೂ ಪ್ರಮುಖವಾದ ವಿಷಯ. ಸರ್ಕಾರ ಕೈಗೊಂಡ ಮೂಲಸೌಕರ್ಯ ಸುಧಾರಣಾ ಕ್ರಮಗಳು ಹಾಗೂ ನೀತಿ ಸುಧಾರಣೆಗಳು ನಗರಗಳ ಸೂಚ್ಯಂಕದ ಮೇಲೆ ಪರಿಣಾಮ ಬೀರಿವೆ. ಆರ್ಥಿಕ ಕುಸಿತದ ಸಂದರ್ಭದಲ್ಲೂ ಸರ್ಕಾರದ ಕ್ರಮಗಳಿಂದ ರಿಯಲ್‌ ಎಸ್ಟೇಟ್‌ನಲ್ಲಿ ಹೂಡಿಕೆ ಹೆಚ್ಚಾಗಿದೆ. ದಕ್ಷಿಣ ಭಾರತದ ನಗರಗಳ ರಿಯಲ್‌ ಎಸ್ಟೇಟ್‌ ಕ್ಷೇತ್ರ ಪ್ರಗತಿಯಾಗುತ್ತಿದೆ’ ಎಂದು ಜೆಎಲ್‌ಎಲ್‌ ಇಂಡಿಯಾ ಕಂಪನಿಯ ಸಿಇಒ ರಮೇಶ್‌ ನಾಯರ್‌ ಹೇಳಿದರು.

‘2019ರಲ್ಲಿ ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್‌ ಉತ್ತಮ ಪ್ರಗತಿ ಕಂಡಿದೆ. ನಗರದ ಆರ್ಥಿಕ ಅಭಿವೃದ್ಧಿ ಚೆನ್ನಾಗಿದೆ. ದೊಡ್ಡ ದೊಡ್ಡ ಸಾಫ್ಟ್‌ವೇರ್‌ ಹಾಗೂ ಇ-ಕಾಮರ್ಸ್‌ ಕಂಪನಿಗಳು ಹೈದರಾಬಾದ್‌ಗೆ ಲಗ್ಗೆ ಇಟ್ಟಿವೆ. ಇದರ ಆಧಾರದಲ್ಲೇ ಹೈದರಾಬಾದ್‌ಗೆ ಮೊದಲ ಸ್ಥಾನ ಬಂದಿದೆ’ ಎಂದು ನಾಯರ್‌ ವಿವರಿಸಿದರು.

ಹೈದರಾಬಾದ್‌ನಲ್ಲಿ ಪ್ರಖರ ಬಿಸಿಲು ಇದ್ದರೂ, ಮಾಳಿಗೆಗಳು ಆ ಶಾಖ ಹೀರಿಕೊಂಡು ಅತ್ಯಂತ ಕಮ್ಮಿ ಬಿಸಿಯನ್ನು ಕಟ್ಟಡಗಳ ಒಳಗೆ ಬಿಡುಗಡೆ ಮಾಡುವ ತಂತ್ರಜ್ಞಾನ ಬಂದಿದೆ. ಇದರಿಂದ ಎ.ಸಿ.ಗಳ ಬೇಡಿಕೆ ಕಡಿಮೆಯಾಗುತ್ತಿದೆ. ಪರಿಸರ ಮಾಲಿನ್ಯ ತಗ್ಗಿಸಲು ಸ್ಮಾರ್ಟ್‌ ಬೈಕ್‌ಗಳ ಬಳಕೆ, ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಇಲ್ಲಿ ವೃದ್ಧಿಯಾಗುತ್ತಿದೆ. ಇದೂ ಕೂಡ ಆ ನಗರದ ಉತ್ತಮ ಶ್ರೇಯಾಂಕಕ್ಕೆ ಕಾರಣ.

ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಪಾಶ್ಚಾತ್ಯ ನಗರಗಳ ಪ್ರಭಾವವು ತಗ್ಗಿ ಭಾರತ, ಚೀನಾ, ವಿಯೆಟ್ನಾಂ ದೇಶಗಳ ನಗರಗಳ ಪ್ರಭಾವ ಹೆಚ್ಚುತ್ತಿರುವುದು ಸಮೀಕ್ಷೆಯಿಂದ ಸ್ಪಷ್ಟವಾಗಿದೆ.

Follow Us:
Download App:
  • android
  • ios