ಪತ್ನಿಗೆ ಸುಮಾರು 49 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಕಾಣಿಕೆಯಾಗಿ ನೀಡಿದ್ದರು. ವಕೀಲರ ಪತ್ನಿ ಸ್ಮಾರ್ಟ್‌ಫೋನ್ ಬಳಸಲು ಆರಂಭಿಸುತ್ತಿದ್ದಂತೆ ಪೊಲೀಸರು ಇವರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಕೋಲ್ಕತ್ತಾ: ವಕೀಲರೊಬ್ಬರು ತಮ್ಮ ಪತ್ನಿಗೆ ಸುಮಾರು 49 ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್‌ಫೋನ್ ಕಾಣಿಕೆಯಾಗಿ ನೀಡಿದ್ದರು. ವಕೀಲರ ಪತ್ನಿ ಸ್ಮಾರ್ಟ್‌ಫೋನ್ ಬಳಸಲು ಆರಂಭಿಸುತ್ತಿದ್ದಂತೆ ಪೊಲೀಸರು ಇವರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಗಂಡ ಪ್ರೀತಿಯಿಂದ ನೀಡದ ಮೊಬೈಲ್ ಇದೀಗ ದುಃಸ್ವಪ್ನವಾಗಿ ಬದಲಾಗಿದೆ. ಮನೆಗೆ ಬಂದ ಪೊಲೀಸರು ಮಹಿಳೆ ಬಳಿಯಲ್ಲಿರುವ ಮೊಬೈಲ್ ಬಳಸಿ ಸೈಬರ್ ಅಪರಾಧಗಳನ್ನು ಎಸಗಲಾಗಿದೆ ಎಂಬ ಅಚ್ಚರಿಯ ಮಾಹಿತಿಯನ್ನು ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಸಾಲ್ಟ್ ಲೇಕ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಕೀಲರೊಬ್ಬರು ಕೋಲ್ಕತ್ತಾದ ಮಿಷನ್ ರೋ ಎಕ್ಸ್‌ಟೆನ್ಷನ್‌ನಲ್ಲಿರುವ ಅಂಗಡಿಯಿಂದ ಮೊಬೈಲ್ ಖರೀದಿಸಿದ್ದರು. ಈ ಮೊಬೈಲ್‌ಗೆ ವಕೀಲರು ಬರೋಬ್ಬರಿ 49,000 ರೂಪಾಯಿ ಪಾವತಿಸಿದ್ದರು. ಇದೇ ಮೊಬೈಲ್‌ನ್ನು ಫೆಬ್ರವರಿಯ ತಮ್ಮ ಮದುವೆ ವಾರ್ಷಿಕೋತ್ಸವ ದಿನದಂದು ಪತ್ನಿಗೆ ಉಡುಗೊರೆಯಾಗಿ ನೀಡಿ ಸರ್ಪೈಸ್ ನೀಡಿದ್ದರು. ದುಬಾರಿ ಬೆಲೆಯ ಮೊಬೈಲ್ ನೋಡಿ ಪತ್ನಿಯೂ ಖುಷಿಯಾಗಿದ್ದರು.

ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆ

ಮೊಬೈಲ್ ಖರೀದಿ ವೇಳೆ ಬಾಕ್ಸ್ ಸೀಲ್ ಆಗಿತ್ತು. ಹಾಗೆಯೇ ಜಿಎಸ್‌ಟಿ ಇನ್ ವಾಯ್ಸ್‌ನೊಂದಿಗೆ ಬಂದಿತ್ತು. ವಕೀಲರು ಖರೀದಿಸಿದ ಮೊಬೈಲ್ ಹೊಚ್ಚ ಹೊಸತನಂತೆಯೇ ಕಾಣಿಸುತ್ತಿತ್ತು. ಖರೀದಿ ವೇಳೆ ಎಲ್ಲಿಯೂ ಇದು ಹಳೆಯ ಮೊಬೈಲ್ ಎಂಬಂತೆ ಕಾಣಿಸುತ್ತಿರಲಿಲ್ಲ. ಹೊಸ ಮೊಬೈಲ್ ಅಂದುಕೊಂಡೇ ಪತ್ನಿಗೆ ಉಡುಗೊರೆಯಾಗಿ ನೀಡಿದ್ದರು.

ಮನೆ ಬಾಗಿಲು ತಟ್ಟಿದ ಗುಜರಾತಿನ ಪೊಲೀಸರು

ಮೊಬೈಲ್ ಬಳಸಲು ಆರಂಭಿಸಿದ ವಾರದ ನಂತರ ಕೋಲ್ಕತ್ತಾದ ವಕೀಲರ ಮನೆ ಬಾಗಿಲನ್ನು ತಟ್ಟಿದ್ದಾರೆ. ವಕೀಲರ ಪತ್ನಿ ಬಳಸುತ್ತಿದ್ದ ಮೊಬೈಲ್, ಸೈಬರ್ ಅಪರಾಧಗಳಲ್ಲಿ ಬಳಕೆಯಾಗಿತ್ತು. ಪೊಲೀಸರು ಫೋನಿನ ಅಂತರರಾಷ್ಟ್ರೀಯ ಮೊಬೈಲ್ ಸಲಕರಣೆ ಗುರುತು (IMEI) ಆಧಾರದ ಮೇಲೆ ಕೋಲ್ಕತ್ತಾ ತಲುಪಿದ್ದರು. ಈ ಮೊಬೈಲ್ ಆನ್‌ಲೈನ್ ವಂಚನೆಯಲ್ಲಿ ಬಳಸಲಾದ ಸಾಧನಕ್ಕೆ ಹೊಂದಿಕೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹೇಳಿದ ವಿಷಯ ಕೇಳುತ್ತಿದ್ದಂತೆ ವಕೀಲರು ಮತ್ತು ಅವರ ಪತ್ನಿ ಶಾಕ್ ಆಗಿದ್ದರು. ನಾವು ಕಾನೂನುಬದ್ಧವಾಗಿಯೇ ಮೊಬೈಲ್ ಖರೀದಿಸಿದ್ದೇವೆ. ನಾವು ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಸೈಬರ್ ಅಪರಾಧ ಚಟುವಟಿಕೆಯಲ್ಲಿಯೂ ಮೊಬೈಲ್ ಬಳಸಿಲ್ಲ ಎಂದು ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಅರಿತ ವಕೀಲರು, ಕೋಲ್ಕತ್ತಾದ ಹರೇ ಸ್ಟ್ರೀಟ್ ಪೊಲೀಸ್ ಠಾಣೆಗೆ ಫೋನ್ ಮಾಡಿ ಮೌಖಿಕವಾಗಿ ದೂರು ದಾಖಲಿಸಿದ್ದಾರೆ. ಮತ್ತೊಂದೆಡೆ ತಾವು ಮೊಬೈಲ್ ಖರೀದಿಸಿದ್ದ ಅಂಗಡಿಯ ಮಾಹಿತಿ ಮತ್ತು ಬಿಲ್ ಪಾವತಿಯ ದಾಖಲೆಯನ್ನು ಪೊಲೀಸರಿಗೆ ನೀಡಿದ್ದಾರೆ.

ಮೊಬೈಲ್ ಶಾಪ್ ಮಾಲೀಕ ಪೊಲೀಸರ ವಶಕ್ಕೆ!

ವಕೀಲರು ಖರೀದಿಸಿದ ಮೊಬೈಲ್ ಶಾಪ್ ಬೌಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ ಪ್ರಕರಣವನ್ನು ಹರೇ ಸ್ಟ್ರೀಟ್ ನಿಂದ ಬೌಬಜಾರ್ ಠಾಣೆಗೆ ವರ್ಗಾಯಿಸಲಾಗಿದೆ. ಪೊಲೀಸರು ಮೊಬೈಲ್ ಶಾಪ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಗೆ ಈ ಮೊಬೈಲ್ ಎಲ್ಲಿಂದ ವಿತರಣೆಯಾಗಿದೆ ಎಂಬುದರ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.