ಯುವತಿಯರಿಗೆ ಕಾರು ಡಿಕ್ಕಿ, ಸಿಸಿಟಿವಿಯಲ್ಲಿ ಬಯಲು, ಆರೋಪಿ ಇನ್ಸ್‌ಪೆಕ್ಟರ್ ಅರೆಸ್ಟ್!
* ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ಅಪಘಾತದ ದೃಶ್ಯ
* ಇಬ್ಬರು ಮಹಿಳೆಯರಿಗೆ ಢಿಕ್ಕಿ ಹೊಡೆದು ಸಾಗಿದ ಕಾರು
* ಆರೋಪಿ ಇನ್ಸ್‌ಪೆಕ್ಟರ್ ಅರೆಸ್ಟ್
ಜಲಂಧರ್(ಅ.18): ಜಲಂಧರ್(Jalandhar) ಫಗ್ವಾರಾ ಹೆದ್ದಾರಿಯ ಧನೋವಳಿ ಬಳಿ ಸೋಮವಾರ ಬೆಳಗ್ಗೆ ವೇಗವಾಗಿ ಬಂದ ಬ್ರಿಜಾ ಕಾರು ಇಬ್ಬರು ಯುವತಿಯರ ಮೇಲೆ ಹಾದು ಹೋಗಿದೆ. ಅಪಘಾತದಲ್ಲಿ(Acident) ಓರ್ವ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೃತಳನ್ನು ಧನನೋವಾಲಿ ನಿವಾಸಿ ನವಜೋತ್ ಕೌ(Navjot Kaur)ರ್ ಎಂದು ಗುರುತಿಸಲಾಗಿದೆ. ನವಜೋತ್ ಕೌರ್ ಕಾಸ್ಮೊ ಹುಂಡೈನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಆಕೆ ತನ್ನ ಸ್ನೇಹಿತೆ ಜೊತೆ ಈ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ವೇಗವಾಗಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಅಪಘಾತದಲ್ಲಿ ನವಜೋತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಸ್ಥಳೀಯರು ಬೆಳಗ್ಗೆ 8: 30 ರ ಸುಮಾರಿಗೆ ಘಟನೆ ಸಂಭವಿಸಿದ್ದು, ಇನ್ಸ್‌ಪೆಕ್ಟರ್(Sub Inspector) ಅತಿವೇಗವಾಗಿ ಕಾರನ್ನು ಚಲಾಯಿಸಿಕೊಂಡು ಧನೋವಲಿ ಗೇಟ್ ಬಳಿ ಯುವತಿಯರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದ್ದಾರೆ ಎಂದು ಹೆಳಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕೂಡ ಹೊರಬಿದ್ದಿದ್ದು, ಇದರಲ್ಲಿ ಇಬ್ಬರು ಯುವತಿಯರು ರಸ್ತೆ ದಾಟಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕಾರು ವೇಗವಾಗಿ ಬಂದಿದೆ. ಇದನ್ನು ನೋಡಿ ಇಬ್ಬರೂ ಹಿಂದೆ ಸರಿದಿದ್ದಾರೆ. ಇದರ ಬೆನ್ನಲ್ಲೇ ಬಂದ ಬ್ರಿಜಾ ಕಾರು ಡಿಕ್ಕಿ ಹೊಡೆದು ಮುಂದೆ ಹೋಗಿದೆ. ಈ ಭಯಾನಕ ವಿಡಿಯೋ ವೈರಲ್ ಆಗಿದ್ದು, ಸದ್ಯ ಆರೋಪಿ ಇನ್ಸ್‌ಪೆಕ್ಟರ್‌ನನ್ನು ಬಂಧಿಸಲಾಗಿದೆ.
ಘಟನೆ ಬೆನ್ನಲ್ಲೇ ಇದನ್ನು ಖಂಡಿಸಿ ಜಲಂಧರ್ ಫಗ್ವಾರಾ ಹೆದ್ದಾರಿಯಲ್ಲಿ ಉಗ್ರ ಪ್ರದರ್ಶನ ನಡೆದಿದೆ. ಇದೊಂದು ಕೊಲೆ ಪ್ರಕರಣ ಎಂದು ದಾಖಲಿಸುವವರೆಗೆ ಈ ಹೆದ್ದಾರಿಯನ್ನು ತೆರೆವುಗೊಳಿಸುವುದಿಲ್ಲ ಎಂದು ಜನರು ಪ್ರತಿಭಡಿಸಿದ್ದಾರೆ. ಮೃತ ಯುವತಿಯ ತಾಯಿ ತೇಜೇಂದ್ರ ಕೌರ್ ಮಾತನಾಡುತ್ತಾ ನಮ್ಮ ಮಗಳು ಬೆಳಿಗ್ಗೆ ಕೆಲಸಕ್ಕೆ ಹೊರಟಿದ್ದಳು, ದಾರಿಯಲ್ಲಿ ನವಲಿ ಗೇಟ್ ಬಳಿ ರಸ್ತೆ ದಾಟುತ್ತಿದ್ದಾಗ, ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಚಾಲಕ ಪರಾರಿಯಾಗಿದ್ದಾನೆ, ಒಬ್ಬ ಯುವತಿ ಸ್ಥಳದಲ್ಲೇ ಮೃತಪಟ್ಟಳು, ಮತ್ತೊಬ್ಬಳಿಗೆ ಗಂಭೀರ ಗಾಯಗಳಾಗಿವೆ ಎಂದಿದ್ದಾರೆ.
ಇನ್ನು ತೇಜೇಂದ್ರ ಕೌರ್ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸುವವರೆಗೆ ಹೆದ್ದಾರಿಯನ್ನು ತೆರೆಯಲಾಗುವುದಿಲ್ಲ ಎಂದಿದ್ದಾರೆ. ಸ್ಥಳಕ್ಕೆ ಬಂದ ಎಸಿಪಿ ಬಲವಿಂದರ್ ಇಕ್ಬಾಲ್ ಸಿಂಗ್, ನಾವು ವಾಹನವನ್ನು ಪತ್ತೆ ಹಚ್ಚಿದ್ದೇವೆ ಎಂದು ಹೇಳಿ ಸಮಾಧಾನಪಡಿಸಿದ್ದಾರೆ. ಇದಾದ ಬಳಿಕ ಆರೋಪಿ ಇನ್ಸ್‌ಪೆಕ್ಟರ್‌ನನ್ನು ಬಂಧಿಸಲಾಯಿತು.