ನವದೆಹಲಿ(ಜೂ.12): ಪೂರ್ವ ಲಡಾಖ್‌ ಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟನ್ನು ಮಾತುಕತೆ ಮೂಲಕ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಒಂದೆಡೆ ಹೇಳುತ್ತಿರುವ ಚೀನಾ, ಮತ್ತೊಂದೆಡೆ ತನ್ನ ಕಪಟ ಮುಖ ತೋರಿಸಿದೆ. 

ಭಾರತ- ಚೀನಾ ನಡುವಿರುವ 4000 ಕಿ.ಮೀ. ಉದ್ದದ ಗಡಿ ವಾಸ್ತವಿಕ ರೇಖೆ(ಎಲ್‌ಎಸಿ)ಯುದ್ದಕ್ಕೂ ಯೋಧರನ್ನು ಜಮಾವಣೆ ಮಾಡುವ ಮೂಲಕ ಯುದ್ಧೋನ್ಮಾದ ತೋರಿದೆ. ಇದಕ್ಕೆ ಭಾರತ ಕೂಡ ಪ್ರತ್ಯುತ್ತರ ನೀಡಿದ್ದು, ಯೋಧರನ್ನು ಗಡಿಗೆ ರವಾನಿಸಿದೆ. ಶೆಲ್‌ ದಾಳಿಗೆ ಬಳಸುವ ಹೌವಿಟ್ಜರ್‌ ಸೇರಿದಂತೆ ವಿವಿಧ ಸಲಕರಣೆಗಳನ್ನು ಗಡಿಯುದ್ದಕ್ಕೂ ನಿಯೋಜನೆ ಮಾಡಿದೆ.

ಲಡಾಖ್‌ನಲ್ಲಿ ಭಾರತ- ಚೀನಾ ಯೋಧರ ನಡುವೆ ಹೊಡೆದಾಟ ನಡೆದ ಬಳಿಕ ಅಲ್ಲಿನ ಗಡಿಯಲ್ಲಿ 10 ಸಾವಿರ ಯೋಧರು ಹಾಗೂ ದೈತ್ಯ ಉಪಕರಣಗಳನ್ನು ಚೀನಾ ನಿಯೋಜನೆ ಮಾಡಿದ್ದ ಸಂಗತಿ ವರದಿಯಾಗಿತ್ತು. ಬಳಿಕ ಆ ಕಗ್ಗಂಟು ಬಗೆಹರಿಸಲು ಉಭಯ ದೇಶಗಳ ನಡುವೆ ಒಂದು ಸುತ್ತಿನ ಮಾತುಕತೆ ನಡೆದು, ಯೋಧರು ಹಿಂದೆ ಸರಿದ ಬಗ್ಗೆಯೂ ತಿಳಿದುಬಂದಿತ್ತು. ಆದರೆ ಲಡಾಖ್‌ನ ಜತೆಗೇ ಹಿಮಾಚಲಪ್ರದೇಶ, ಉತ್ತರಾಖಂಡ, ಸಿಕ್ಕಿಂ ಹಾಗೂ ಅರುಣಾಚಲಪ್ರದೇಶದವರೆಗೂ ಇರುವ ಗಡಿಯಲ್ಲಿ ಯೋಧರನ್ನು ಚೀನಾ ಜಮಾವಣೆ ಮಾಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯೊಮದು ವರದಿ ಮಾಡಿದೆ.

5ನೇ ಬಾರಿ ಇಸ್ರೇಲ್ ಪ್ರಧಾನಿಯಾದ ನೆತನ್ಯಾಹುಗೆ ಪಿಎಂ ಮೋದಿ ಶುಭಾಶಯ!

ಭಾರಿ ಸಂಖ್ಯೆಯ ಯೋಧರು ಹಾಗೂ ದೈತ್ಯ ಗಾತ್ರದ ಯುದ್ಧ ಸಲಕರಣೆಗಳನ್ನು ಗಡಿ ಸಮೀಪಕ್ಕೆ ಚೀನಾ ತಂದಿದೆ. ಆ ದೇಶ ಯಾವುದೇ ದುಸ್ಸಾಹಸಕ್ಕೆ ಇಳಿಯದಂತೆ ತಡೆಯುವ ಉದ್ದೇಶದಿಂದ ಗಡಿಯ ಮುಂಚೂಣಿ ಪ್ರದೇಶಗಳಿಗೆ ನಾವೂ ಯೋಧರನ್ನು ರವಾನಿಸಿದ್ದೇವೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ಪಡೆಗಳ ನಿಯೋಜನೆಗೂ ಮುನ್ನ ಏಪ್ರಿಲ್‌ನಲ್ಲಿ ಚೀನಾದ ಹೆಲಿಕಾಪ್ಟರ್‌ಗಳು ಭಾರತದ ಗಡಿವರೆಗೂ ಹಾರಾಟ ನಡೆಸಿವೆ. ಎಲ್ಲಿ ಹೆಲಿಕಾಪ್ಟರ್‌ಗಳು ಕಾಣಿಸಿಕೊಂಡಿದ್ದವೋ ಅಲ್ಲೆಲ್ಲಾ ಭದ್ರತೆ ಬಿಗಿಗೊಳಿಸಲಾಗಿದೆ. ಶೆಲ್‌ ದಾಳಿಗೆ ಬಳಸುವ ಹೌವಿಟ್ಜರ್‌ ಗನ್‌ಗಳು ಹಾಗೂ ಇನ್ನಿತರೆ ಯುದ್ಧ ಸಲಕರಣೆಗಳನ್ನು ಗಡಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ನಿಯೋಜನೆ?

ಉತ್ತರದ ಲಡಾಖ್‌ನಿಂದ ಹಿಮಾಚಲಪ್ರದೇಶ, ಉತ್ತರಾಖಂಡ, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳ ಗಡಿಯುದ್ದಕ್ಕೂ ನಿಯೋಜನೆ.

ಏನೇನು ರವಾನೆ?

ಭಾರೀ ಸಂಖ್ಯೆಯಲ್ಲಿ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಯೋಧರು ಹಾಗೂ ದೈತ್ಯ ಗಾತ್ರದ ಯುದ್ಧ ಸಲಕರಣೆಗಳ ರವಾನೆ.

ಶಾಂತಿ ಯತ್ನ

ಗಡಿ ಪ್ರದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಉಭಯ ದೇಶಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದ ಮಾತುಕತೆಗಳು ಜಾರಿಯಲ್ಲಿವೆ. ಆದಷ್ಟುಬೇಗ ಬಿಕ್ಕಟ್ಟು ಶಮನಗೊಳ್ಳುವ ವಿಶ್ವಾಸವಿದೆ.

- ಅನುರಾಗ್‌ ಶ್ರೀವಾಸ್ತವ, ಭಾರತದ ವಿದೇಶಾಂಗ ವಕ್ತಾರ