ಇಲ್ಲಿನ ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟದ ಭೀಕರತೆಯನ್ನು ಕೆಲ ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ. ‘ರಸ್ತೆಯ ಮೇಲೆಲ್ಲಾ ಕೆಲವರ ಶ್ವಾಸಕೋಶ, ತುಂಡಾದ ಕೈ ಸೇರಿದಂತೆ ದೇಹದ ಭಾಗಗಳು ಛಿದ್ರವಾಗಿ ಬಿದ್ದದ್ದು ಕಾಣಿಸಿತು.

ನವದೆಹಲಿ: ಇಲ್ಲಿನ ಕೆಂಪುಕೋಟೆಯ ಬಳಿ ಸಂಭವಿಸಿದ ಸ್ಫೋಟದ ಭೀಕರತೆಯನ್ನು ಕೆಲ ಪ್ರತ್ಯಕ್ಷದರ್ಶಿಗಳು ಬಿಚ್ಚಿಟ್ಟಿದ್ದಾರೆ. ‘ರಸ್ತೆಯ ಮೇಲೆಲ್ಲಾ ಕೆಲವರ ಶ್ವಾಸಕೋಶ, ತುಂಡಾದ ಕೈ ಸೇರಿದಂತೆ ದೇಹದ ಭಾಗಗಳು ಛಿದ್ರವಾಗಿ ಬಿದ್ದದ್ದು ಕಾಣಿಸಿತು. ಇದನ್ನೆಲ್ಲಾ ನೋಡಿ ಭಯಭೀತರಾದ ನಾವು ಮುಂದೆ ಹೋಗಲು ಧೈರ್ಯ ಮಾಡಲಿಲ್ಲ’ ಎಂದು ದಾರಿಹೋಕರೊಬ್ಬರು ಭೀತಿಯಲ್ಲೇ ಹೇಳಿದ್ದಾರೆ.

ಭೂಮಿಯೇ ಬಾಯ್ಬಿಡಲಿದೆ ಎನಿಸಿಬಿಟ್ಟಿತು

ದುರ್ಘಟನೆ ಸಂಭವಿಸಿದ ಪ್ರದೇಶದ ಸಮೀಪದಲ್ಲೇ ಇದ್ದ ಅಂಗಡಿಯ ಮಾಲೀಕರೊಬ್ಬರು ದಿಗಿಲಲ್ಲೇ ಮಾತನಾಡಿ, ‘ಸ್ಫೋಟದ ಸದ್ದಿಗೆ ಬೆಚ್ಚಿ ನಾನು 3 ಬಾರಿ ಬಿದ್ದೆ. ಒಂದು ಕ್ಷಣ ಭೂಮಿಯೇ ಬಾಯ್ಬಿಡಲಿದೆ ಎನಿಸಿಬಿಟ್ಟಿತು. ಅಂಗಡಿ ಬಿಟ್ಟು ಓಡತೊಡಗಿದ ನನಗೆ ಸುತ್ತಲಿನ ಸ್ಥಿತಿ ನೋಡಿ, ಕೆಲವೇ ಸಮಯದಲ್ಲಿ ನಾನೂ ಸಾಯಲಿದ್ದೇನೆ ಎಂಬ ಭಯ ಶುರುವಾಯಿತು. ಸಾವಿನೊಂದಿಗೆ ಮುಖಾಮುಖಿಯಾದಂತಾಯಿತು’ ಎಂದು ಹೇಳಿದ್ದಾರೆ.

ಕೆಂಪುಕೋಟೆಯ ಸಮೀಪ ವಾಸವಿರುವ ಹಿರಿಯರೊಬ್ಬರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ‘ಮನೆಯ ಮೇಲಿದ್ದ ನನಗೆ ದೂರದಲ್ಲಿ ಎಲ್ಲೋ ಸ್ಫೋಟವಾಗಿದ್ದು ಕಾಣಿಸಿತು. ಜತೆಗೆ ಭೀಕರ ಸದ್ದೂ ಕೇಳಿಸಿ, ನಮ್ಮ ಮನೆ ಕಂಪಿಸಿದಂತಾಯಿತು. ಏನಾಯಿತೆಂದು ನೋಡಲು ಕೆಳಗೆ ಬಂದೆ’ ಎಂದು ನುಡಿದಿದ್ದಾರೆ.

ಸ್ಫೋಟದ ಕಾರಿಗೆ ಪುಲ್ವಾಮಾ ನಂಟು

ನವದೆಹಲಿ: ಸೋಮವಾರ ದೆಹಲಿಯಲ್ಲಿ ಸ್ಫೋಟಗೊಂಡ ಕಾರು ಪುಲ್ವಾಮಾ ಮೂಲದ ತಾರಿಖ್‌ ಎನ್ನುವ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಮೂಲಕ ಹರ್ಯಾಣ ಮೂಲದ ಸಲ್ಮಾನ್‌ ಎಂಬುವವರ ಹೆಸರಲ್ಲಿ ಕಾರು ನೋಂದಣಿಯಾಗಿದೆ. ಆದರೆ ಕಳೆದ 18 ತಿಂಗಳಲ್ಲಿ ಇದು ಹಲವರ ಕೈಬದಲಾಯಿಸಿ ಅಂತಿಮವಾಗಿ ಕಾಶ್ಮೀರದ ಪುಲ್ವಾಮಾ ವಾಸಿ ತಾರಿಖ್‌ ಬಳಿ ಸೇರಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕಾರಿನ ಮೂಲ ಮಾಲೀಕ ಸಲ್ಮಾನ್‌ನನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಮೃತರು, ಗಾಯಾಳುಗಳಲ್ಲಿ

ಬಹುತೇಕರು ದಿಲ್ಲಿ ವಾಸಿಗಳು

ನವದೆಹಲಿ: ದೆಹಲಿಯಲ್ಲಿ ನಡೆದ ಕಾರ್‌ ಸ್ಫೋಟದ ಸಂತ್ರಸ್ತರಲ್ಲಿ ಬಹುತೇಕರು ದೆಹಲಿ ನಿವಾಸಿಗಳೆಂದು ತಿಳಿದುಬಂದಿದೆ. 8 ಮೃತರಲ್ಲಿ ಒಬ್ಬರ ಗುರುತು ಪತ್ತೆಯಾಗಿದ್ದು, ಅವರನ್ನು ಉತ್ತರಪ್ರದೇಶದ ಅಶೋಕ್‌ ಕುಮಾರ್‌(34) ಎಂದು ಗುರುತಿಸಲಾಗಿದೆ. ಉಳಿದಂತೆ ಗಂಭೀರವಾಗಿ ಗಾಯಗೊಂಡ 20 ಮಂದಿಯಲ್ಲಿ ಬಹುತೇಕರು ದೆಹಲಿಯವರಾಗಿದ್ದು, ಉಳಿದವರು ಉತ್ತರಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ರಾಜ್ಯದವರು ಎಂದು ತಿಳಿದುಬಂದಿದೆ.

ಕಾರು ಮಾರಿದ್ದ ಸಲ್ಮಾನ್‌ ಅರೆಸ್ಟ್‌

ನವದೆಹಲಿ: ಸೋಮವಾರದ ಸ್ಫೋಟ ಘಟನೆ ಸಂಬಂಧ ಕಾರಿನ ಹಿಂದಿನ ಮಾಲೀಕ ಸಲ್ಮಾನ್‌ ಎಂಬಾತನನ್ನು ಬಂಧಿಸಲಾಗಿದೆ. ಈಗ ದೆಹಲಿ ಓಕ್ಲಾ ಪ್ರದೇಶದ ನದೀಂ ಎಂಬುವವರಿಗೆ ಈ ಕಾರು ಮಾರಾಟ ಮಾಡಿದ್ದು ಎಂದು ಬೆಳಕಿಗೆ ಬಂದ ಬೆನ್ನಲ್ಲೇ ಆತನನ್ನು ಬಂಧಿಸಲಾಗಿದೆ.

ಸ್ಪೋಟ ಸ್ಥಳದಲ್ಲಿ ಜೀವಂತ ಗುಂಡು ಪತ್ತೆ

ನವದೆಹಲಿ: ಸೋಮವಾರ ಕಾರು ಸ್ಫೋಟ ನಡೆದ ಸ್ಥಳದಲ್ಲಿ ಜೀವಂತ ಗುಂಡೊಂದು ಪತ್ತೆಯಾಗಿದೆ. ಹೀಗಾಗಿ ಘಟನೆಯಲ್ಲಿ ಉಗ್ರ ಸಂಘಟನೆಗಳ ಕೈವಾಡದ ಶಂಕೆ ಮತ್ತಷ್ಟು ದೃಢವಾಗಿದೆ. ಸ್ಫೋಟದ ಸ್ಥಳದಲ್ಲಿ ಅವಶೇಷಗಳ ನಡುವೆ ಗುಂಡು ಕಂಡುಬಂದಿದೆ.

ಈ ವರ್ಷದ 2ನೇ ಉಗ್ರ ದಾಳಿ 

ನವದೆಹಲಿ: ದೆಹಲಿಯಲ್ಲಿ ಸೋಮವಾರ ಸಂಭವಿಸಿದ ಉಗ್ರ ದಾಳಿಯ ಕೃತ್ಯವು ಈ ವರ್ಷ ದೇಶದಲ್ಲಿ ನಡೆದ ಎರಡನೇ ಭಯೋತ್ಪಾದಕ ಕೃತ್ಯವಾಗಿದೆ. ಇದಕ್ಕೂ ಮೊದಲು ಏ.22ರಂದು ಪಾಕಿಸ್ತಾನ ಮೂಲದ ಉಗ್ರರು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಕರ್ನಾಟಕದ ಇಬ್ಬರು ಸೇರಿ 26 ಜನರನ್ನು ಹತ್ಯೆಗೈದಿದ್ದರು.

ದೆಹಲಿ ದಾಳಿ

ಅ.10, 1997: ಶಾಂತಿವನ, ಕೌರಿಯಾ ಪುಲ್‌ ಮತ್ತು ಕಿಂಗ್ಸ್‌ವೇ ಕ್ಯಾಂಪ್ ಪ್ರದೇಶಗಳಲ್ಲಿ ನಡೆದಿದ್ದ ಮೂವರು ಬಾಂಬ್‌ ಸ್ಫೋಟ. ಓರ್ವ ಸಾವು , 16 ಜನರಿಗೆ ಗಾಯ.

ಅ.18, 1997: ರಾಣಿ ಬಾಗ್‌ ಮಾರುಕಟ್ಟೆ ಮೇಲೆ ನಡೆದಿದ್ದ ಅವಳಿ ಬಾಂಬ್‌ ದಾಳಿ. ಓರ್ವ ಸಾವು, 23 ಮಂದಿಗೆ ಗಾಯ.

ಅ.26, 1997: ಕರೋಲ್‌ ಬಾಗ್‌ ಮೇಲೆ ನಡೆದಿದ್ದ ಅವಳಿ ಸ್ಪೋಟ. ಒಬ್ಬರು ಸಾವನ್ನಪ್ಪಿ 70 ಮಂದಿ ಗಾಯಗೊಂಡಿದ್ದರು.

ಡಿ.30, 1997: ಪಂಜಾಬಿ ಬಾಗ್‌ ಬಳಿ ಬಸ್‌ನಲ್ಲಿ ಬಾಂಬ್‌ ಸ್ಫೋಟ್‌. 4 ಪ್ರಯಾಣಿಕರು ಮೃತ. 30 ಜನರಿಗೆ ಗಾಯ.

ಜು: 26,1998: ಅಂತಾರಾಜ್ಯ ಬಸ್‌ ಟರ್ಮಿನಲ್‌ನ ಕಾಶ್ಮೀರಿ ಗೇಟ್‌ನಲ್ಲಿ ನಿಲ್ಲಿಸಲಾಗಿದ್ದ ಬಸ್‌ನಲ್ಲಿ ಸ್ಪೋಟ. 2 ಸ್ಪೋಟ, ಮೂವರಿಗೆ ಗಾಯ.

ಜೂ. 18, 2000: ಕೆಂಪು ಕೋಟೆ ಬಳಿ ನಡೆದ ಎರಡು ಪ್ರಬಲ ಬಾಂಬ್ ಸ್ಫೋಟಗಳಲ್ಲಿ ಎಂಟು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಸಾವು. ಸುಮಾರು 12 ಮಂದಿಗೆ ಗಾಯ.

ಮೇ 22, 2005: ದೆಹಲಿಯ ಎರಡು ಸಿನಿಮಾ ಮಂದಿರಗಳಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಒಬ್ಬ ಸಾವು. 60 ಜನರು ಗಾಯ.

ಸೆ. 27, 2008: ಕುತುಬ್ ಮಿನಾರ್ ಬಳಿಯ ಮೆಹ್ರೌಲಿ ಹೂವಿನ ಮಾರುಕಟ್ಟೆಯಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿತ್ತು ಮೂವರು ಸಾವನ್ನಪ್ಪಿ, 21 ಜನರು ಗಾಯಗೊಂಡಿದ್ದರು.

ಮುಂಬೈ, ಯುಪಿ ಸೇರಿ ದೇಶಾದ್ಯಂತ ಹೈ ಅಲರ್ಟ್‌

ಮುಂಬೈ: ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಭೀಕರ ಸ್ಫೋಟ ಬೆನ್ನಲ್ಲೇ ವಾಣಿಜ್ಯ ನಗರಿ ಮುಂಬೈ, ಉತ್ತರಪ್ರದೇಶ ಸೇರಿದಂತೆ ದೇಶಾದ್ಯಂತ ಹೈ ಅಲರ್ಟ್‌ ಘೋಷಿಸಲಾಗಿದ್ದು, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.

ಮಹಾರಾಷ್ಟ್ರದ ಪ್ರಮುಖ ಸ್ಥಳಗಳಾದ ತಾಜ್‌ ಹೋಟೆಲ್‌, ಗೇಟ್‌ ವೇ ಆಫ್‌ ಇಂಡಿಯಾ , ಸಿದ್ಧಿ ವಿನಾಯಕ ದೇವಸ್ಥಾನ, ರೈಲು ನಿಲ್ದಾಣ ಸೇರಿದಂತೆ ಜನನಿಬಿಡ ಪ್ರವಾಸಿ ತಾಣಗಳಲ್ಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಗಸ್ತು ತಿರುಗುವಂತೆ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ರಾಮಮಂದಿರ, ಕಾಶಿ, ವಾರಾಣಸಿಯಂತಹ ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಅಯೋಧ್ಯೆಯಲ್ಲಿಯೂ ಪೊಲೀಸರು ಕಣ್ಗಾವಲಿರಿಸಿದ್ದು, ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಿದ್ದಾರೆ.

ಸುಂದರ ಸಂಜೆ ನರಕವಾಯ್ತು

ನವದೆಹಲಿ: ಎಂದಿನ ಸೋಮವಾರದ ಸಂಜೆಯಂತೆ ಜನ ಕೆಲಸ ಮುಗಿಸಿ ಮನೆಗೆ ತೆರಳುವ ಧಾವಂತದಲ್ಲಿದ್ದಾಗ, ಒಂದು ಕ್ಷಣದಲ್ಲಿ ನಡೆದ ದುರ್ಘಟನೆಯೊಂದು ರಾಷ್ಟ್ರರಾಜಧಾನಿಯ ಚಿತ್ರಣವನ್ನೇ ಬದಲಿಸಿ, ಇಡೀ ದೇಶದ ಚಿತ್ತವನ್ನು ತನ್ನತ್ತ ಸೆಳೆಯಿತು. ಕೆಂಪು ಟ್ರಾಫಿಕ್‌ ದೀಪ ಆರುವುದನ್ನೇ ಕಾಯುತ್ತಿದ್ದ ಅದೆಷ್ಟೋ ಜನ, ಇದ್ದಕ್ಕಿದ್ದಂತೆ ಕಾರೊಂದು ದೊಡ್ಡ ಸದ್ದಿನೊಂದಿಗೆ ಸಿಡಿದಿದ್ದನ್ನು ಕಂಡು ಬೆಚ್ಚಿದ್ದರು. ಏನಾಯಿತೆಂದು ತಿಳಿಯುವ ಮೊದಲೇ, ಸುತ್ತಲಿದ್ದವರು ಶವವಾಗಿದ್ದರು. ವಾಹನಗಳ ಅವಶೇಷಗಳ ನಡುವೆ ಮಾನವರ ರಕ್ತ ಚಿಮ್ಮಿ, ಕೈ, ಕಾಲಿನಂತಹ ಭಾಗಗಳು ಬೇರ್ಪಟ್ಟು ರಸ್ತೆಯ ತುಂಬೆಲ್ಲಾ ಬಿದ್ದಿದ್ದವು. ಮೃತರ ದೇಹಗಳು ಗುರುತು ಸಿಗದಷ್ಟು ವಿರೂಪವಾಗಿ ಸ್ಥಳವು ನರಕದರ್ಶನವಾಗಿತ್ತು.