ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಬಂಧಕ್ಕೆ ವಿಶ್ವಸಂಸ್ಥೆಯೂ ಪ್ರತಿಕ್ರಿಯೆ ನೀಡಿದೆ. ಭಾರತದಲ್ಲಿ ಎಲ್ಲರ ಹಕ್ಕುಗಳ ರಕ್ಷಣೆಯಾಗಲಿ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಯಲಿ ಎಂದು ಹೇಳಿದೆ.

ನ್ಯೂಯಾರ್ಕ್‌ (ಮಾ.30): ಅಬಕಾರಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ಬಂಧನಕ್ಕೆ ಜರ್ಮನಿ ಹಾಗೂ ಅಮೆರಿಕ ಸರ್ಕಾರಗಳು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ವಿಶ್ವಸಂಸ್ಥೆ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದೆ. ‘ಭಾರತದಲ್ಲಿ ಎಲ್ಲರ ರಾಜಕೀಯ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆಯಾಗುತ್ತದೆ ಎಂದು ನಿರೀಕ್ಷಿಸುತ್ತೇವೆ. ಚುನಾವಣೆಯಲ್ಲಿ ಎಲ್ಲರೂ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಮತದಾನ ಮಾಡುವ ವಾತಾವರಣವಿರುತ್ತದೆ ಎಂದು ಆಶಿಸುತ್ತೇವೆ’ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯ ವಕ್ತಾರರು ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ವಕ್ತಾರ ಸ್ಟೆಫಾನಿ ಡುಜರಿಕ್‌ ಅವರಿಗೆ ಅರವಿಂದ ಕೇಜ್ರಿವಾಲ್‌ ಅವರ ಬಂಧನ ಹಾಗೂ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳ ಜಪ್ತಿಯ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ‘ಭಾರತ ಹಾಗೂ ಚುನಾವಣೆ ನಡೆಯುವ ಯಾವುದೇ ದೇಶದಲ್ಲಿ ಎಲ್ಲಾ ರಾಜಕೀಯ ಹಾಗೂ ನಾಗರಿಕ ಹಕ್ಕುಗಳ ರಕ್ಷಣೆಯಾಗುತ್ತದೆ ಮತ್ತು ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಹೇಳಿದರು.

ಕೇಜ್ರಿವಾಲ್‌ ಅವರ ಬಂಧನ ಹಾಗೂ ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಖಾತೆಗಳ ಜಪ್ತಿಗೆ ಜರ್ಮನಿ ಹಾಗೂ ಅಮೆರಿಕದ ಆಕ್ಷೇಪ ಮತ್ತು ಅದಕ್ಕೆ ಭಾರತ ರಾಜತಾಂತ್ರಿಕವಾಗಿ ಪ್ರತಿಭಟನೆ ಸಲ್ಲಿಸಿದ ಬೆನ್ನಲ್ಲೇ ವಿಶ್ವಸಂಸ್ಥೆಯಿಂದ ಈ ಪ್ರತಿಕ್ರಿಯೆ ಬಂದಿರುವುದು ಮಹತ್ವ ಪಡೆದಿದೆ.

ಲಾಲು ಪತ್ನಿ ರಾಬ್ಡೀ ರೀತಿ ಸಿಎಂ ಪಟ್ಟ ಏರಲು ಕೇಜ್ರಿ ಪತ್ನಿ ಸುನಿತಾ ಯತ್ನ: ಪುರಿ
ನವದೆಹಲಿ:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಬಿಹಾರದ ಮಾಜಿ ಸಿಎಂ ರಾಬ್ಡೀ ದೇವಿ ರೀತಿ ತಮ್ಮ ಪತಿ ಹುದ್ದೆ ಅಲಂಕರಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದರು. ಬಿಜೆಪಿಯ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸುನೀತಾ ಕೇಜ್ರಿವಾಲ್ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ ಪತ್ನಿ ರಾಬ್ಡೀ ದೇವಿ ರೀತಿ ಸಿಎಂ ಹುದ್ದೆ ಏರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು. ಕೇಜ್ರಿವಾಲ್‌ ಬಂಧನದ ಬಳಿಕ ಸತತವಾಗಿ ಅವರ ಪರವಾಗಿ ಮತ್ತು ದೆಹಲಿ ಸರ್ಕಾರದ ಪರವಾಗಿ ಸುನೀತಾ ಹೇಳಿಕೆ ಬಿಡುಗಡೆ ಮಾಡುತ್ತಿರುವ ಮತ್ತು ಪತ್ರಿಕಾಗೋಷ್ಠಿ ನಡೆಸುತ್ತಿರುವ ಬೆನ್ನಲ್ಲೇ ಪುರಿ ಈ ಹೇಳಿಕೆ ನೀಡಿದ್ದಾರೆ. 1997ರಲ್ಲಿ ಮೇವು ಹಗರಣ ಸಂಬಂಧ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲುಗೆ ಸಮನ್ಸ್‌ ನೀಡಿದ ಬೆನ್ನಲ್ಲೇ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾಬ್ಡೀ ದೇವಿ ಮುಖ್ಯಮಂತ್ರಿಯಾಗಿದ್ದರು.

ಕೇಜ್ರಿ ಬೆಂಬಲಕ್ಕೆ ಪತ್ನಿ ಸುನಿತಾ ವಾಟ್ಸಪ್‌ ಅಭಿಯಾನ
ನವದೆಹಲಿ:
ಮದ್ಯ ಲೈಸೆನ್ಸ್‌ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ಅರವಿಂದ್‌ ಕೇಜ್ರಿವಾಲ್‌ರನ್ನು ಬೆಂಬಲಿಸುವಂತೆ ಅವರ ಪತ್ನಿ ಸುನಿತಾ ವಾಟ್ಸಪ್‌ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಕೇಜ್ರಿವಾಲ್‌ಗೆ ಆಶೀರ್ವಾದ ಎನ್ನುವ ಹೆಸರಿನಲ್ಲಿ ಅಭಿಯಾನ ಪ್ರಾರಂಭಿಸಿದ್ದು, ಸಾರ್ವಜನಿಕರು 8297324624/9700297002 ಗೆ ವಾಟ್ಸಪ್‌ ಮೂಲಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸಂದೇಶವನ್ನು ಕಳುಹಿಸಬಹುದು. ಅವರು ಸ್ವಾತಂತ್ರ್ಯ ಯೋಧರಂತೆ ದೇಶದ ಭ್ರಷ್ಟ ಮತ್ತು ಸರ್ವಾಧಿಕಾರಿಗಳ ವಿರುದ್ಧ ದಿಟ್ಟತನದಿಂದ ಹೋರಾಡುತ್ತಿದ್ದಾರೆ. ಅವರ ಬಿಡುಗಡೆಗೆ ಕೆಲವರು ಉಪವಾಸ ಮಾಡುತ್ತಿದ್ದಾರೆಂದೂ ತಾವು ಕೇಳಲ್ಪಟ್ಟಿದ್ದು, ಅಂತಹ ವಿಷಯಗಳನ್ನು ಈ ನಂಬರ್‌ಗೆ ವಾಟ್ಸಪ್‌ ಮಾಡಿ ಹಂಚಿಕೊಳ್ಳಿ ಎಂದು ಸುನಿತಾ ಕರೆ ನೀಡಿದ್ಧಾರೆ.

ಸಿಎಂ ಕೇಜ್ರಿವಾಲ್‌ಗೆ ಹೊಸ ಸಂಕಷ್ಟ, ಲೈಂಗಿಕ ಕಿರುಕುಳ ಆರೋಪಿ ಫೈಲ್ ತಡೆದ ಆರೋಪ!

ಸತ್ಯೇಂದ್ರ ಜೈನ್‌ ಲಂಚ ಪ್ರಕರಣ ಸಿಬಿಐ ತನಿಖೆಗೆ ಕೇಂದ್ರ ಗೃಹ ಇಲಾಖೆ ಅಸ್ತು
ನವದೆಹಲಿ:
ದೆಹಲಿ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬಂಧನದ ಬಳಿಕ ಆಮ್‌ ಆದ್ಮಿ ಪಕ್ಷಕ್ಕೆ ಮತ್ತೊಂದು ತಲೆಬಿಸಿ ಎದುರಾಗಿದೆ. ವಂಚಕ ಸುಕೇಶ್‌ ಚಂದ್ರಶೇಖರ್‌ ಅವರಿಂದ ಸಚಿವ ಸತ್ಯೇಂದ್ರ ಜೈನ್‌ ಲಂಚ ಪಡೆದುಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಹೀಗಾಗಿ ಈಗಾಗಲೇ 4 ವರ್ಷದಿಂದ ಜೈಲಿನಲ್ಲಿರುವ ಸತ್ಯೇಂದ್ರ ಜೈನ್‌ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಈ ಹಿಂದೆ ತಿಹಾರ್‌ ಜೈಲಿನಲ್ಲಿ ವಂಚಕ ಸುಕೇಶ್‌ ಚಂದ್ರಶೇಖರ್‌ ಅವರಿಂದ ಸಚಿವ ಸತ್ಯೇಂದ್ರ ಜೈನ್‌ ಅವರು 10 ಕೋಟಿ ರು. ಲಂಚ ಪಡೆದಿದ್ದನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2017ರಲ್ಲೇ ಜೈನ್‌ ಅವರನ್ನು ಸಿಬಿಐ ಬಂಧಿಸಿತ್ತು.

Breaking: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್‌ ನೀಡಿದ ದೆಹಲಿ ಹೈಕೋರ್ಟ್‌