ನವದೆಹಲಿ(ಫೆ.13): ದೆಹಲಿ ಚುನಾವಣೆ ಸೋಲಿನ ಕುರಿತು ಮೌನ ಮುರಿದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಚಾರದ ವೇಳೆ ನಮ್ಮ ನಾಯಕರು ಮಾಡಿದ ಪ್ರಚೋದನಾತ್ಮಕ ಹೇಳಿಕೆಗಳು ವಿಷಾದನೀಯ ಎಂದು ಹೇಳಿದ್ದಾರೆ. 

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರು ಗೋಲಿ ಮಾರೋ(ಗುಂಡಿಕ್ಕಿ), ಭಾರತ-ಪಾಕ್ ಯುದ್ಧ ಮುಂತಾದ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದು ಪಕ್ಷಕ್ಕೆ ಮುಳುವಾಯಿತು ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿ ‘ಕಮಲ’ ಮುಡಿಯದಿರಲು ಕಾರಣ: ಬೆರೆಸಲೇ ಇಲ್ಲ ಅಭಿವೃದ್ಧಿಯ ಹೂರಣ!

ಸುದ್ದಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ನಮ್ಮ ನಾಯಕರು ಪ್ರಚೋದಾನಾತ್ಮಕ ಹೇಳಿಕೆಗಳು ನಕಾರಾತ್ಮಕ ಪರಿಣಾಮ ಬೀರಿದವು ಎಂದು ಒಪ್ಪಿಕೊಂಡಿದ್ದಾರೆ.

ಆದರೆ ಬಿಜೆಪಿ ಕೇವಲ ಸೋಲು ಗೆಲುವಿಗಾಗಿ ಚುನಾವಣೆ ಎದುರಿಸುವುದಿಲ್ಲ ಎಂದಿರುವ ಶಾ, ಚುನಾವಣೆಯ ಮೂಲಕ ತನ್ನ ಸಿದ್ಧಾಂತವನ್ನು ವಿಸ್ತರಿಸುವುದರಲ್ಲಿ ಬಿಜೆಪಿ ನಂಬಿಕೆಯನ್ನು ಹೊಂದಿದೆ ಎಂದು ಹೇಳಿದ್ದಾರೆ.

 ಇದೇ ವೇಳೆ ದೆಹಲಿ ಚುನಾವಣಾ ಫಲಿತಾಂಶ ಸಿಎಎ ಹಾಗೂ NRC ಕುರಿತ ಜನಾದೇಶವಲ್ಲ ಎಂದಿರುವ ಗೃಹ ಸಚಿವ, ಈ ಕಾನೂನು ಪ್ರಕ್ರಿಯೆಗಳ ಕುರಿತು ಚರ್ಚಿಸಲು ಬಯಸುವವರು ನಮ್ಮ ಪಕ್ಷದ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.