ಮುಂಬೈ(ನ.04): ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಎಡಿಟರ್ ಇನ್ ಚೀಫ್ ಅರ್ನಬ್ ಗೋಸ್ವಾಮಿಯನ್ನು ಅವರ ಮನೆಯಿಂದ ಬುಧವಾರ ಬೆಳಗ್ಗೆ ಸುಮಾರು 6.30 ಗಂಟೆಗೆ ಬಂಧಿಸಿದ್ದಾರೆ. ಅವರನ್ನು ಮೊದಲು ಕ್ರೈಂ ಬ್ರಾಂಚ್ ಆಫೀಸ್ ಹಾಗೂ ಇದಾದ ಬಳಿಕ ಆಲೀಭಾಗ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಗೋಸ್ವಾಮಿ ಬಂಧನವನ್ನು ಖಂಡಿಸಿದ್ದಾರೆ. ಅವರು ಈ ನಡೆಯನ್ನು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದಿದ್ದಾರೆ. ಇದು ತುರ್ತು ಪರಿಸ್ಥಿತಿ ನೆನಪಿಸಿದೆ ಎಂದಿದ್ದಾರೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ಮೇಲೆ ನಡೆದ ದಾಳಿ

ಈ ಸಂಬಂಧ ಟ್ವೀಟ್ ಮಾಡಿರುವ ಗೃಹ ಸಚಿವ ಅಮಿತ್ ಶಾ 'ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳು ಮತ್ತೊಂದು ಬಾರಿ ಪ್ರಜಾಪ್ರಭುತ್ವವನ್ನು ತಲೆತಗ್ಗಿಸುವಂತೆ ಮಾಡಿದ್ದಾರೆ. ರಿಪಬ್ಲಿಕ್ ಟಿವಿ ಹಾಗೂ ಅರ್ನಬ್ ಗೋಸ್ವಾಮಿ ವಿರುದ್ಧ ರಾಜ್ಯ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಹಾಗೂ ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ದಾಳಿ ನಡೆಸಿದೆ. ಇದು ನನಗೆ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತೆವ ಮಾಡಿದೆ. ಇದು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಪತ್ರಿಕೋದ್ಯಮದ ಮೇಲೆ ನಡೆದ ದಾಳಿ ಹೀಗಾಗಿ ಇದನ್ನು ವಿರೋಧಿಸುತ್ತೇನೆ' ಎಂದಿದ್ದಾರೆ.

ಇದು ಅನುಚಿತ ವರ್ತನೆ

ಪ್ರಕರಣ ಸಂಬಂಧ ಟ್ವೀಟ್ ಮಾಡಿರುವ ರವಿಶಂಕರ್ ಪ್ರಸಾದ್ ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನ ಗಂಭೀರವಾಗಿ ಖಂಡಿಸಬೇಕಾಗಿದೆ. ಇದೊಂದು ಅನುಚಿತ ಹಾಗೂ ಚಿಂತಾಜನಕ ವಿಚಾರ. ನಾವು 1975ರಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ಹೋರಾಡಿದ್ದೆವು ಎಂದಿದ್ದಾರೆ.