ಕಳ್ಳತನ ತಡೆಯಲು ವಾರಾಣಸಿಯಲ್ಲಿ ಬೀದಿ ಬದಿ ವ್ಯಾಪಾರಿಯಿಂದ ನೇಮಕ, ಟೊಮೆಟೋಗೆ ಝಡ್‌ ಪ್ಲಸ್‌ ಭದ್ರತೆ ನೀಡಿ: ಅಖಿಲೇಶ್‌ ಯಾದವ್‌ ವ್ಯಂಗ್ಯ. 

ವಾರಾಣಸಿ(ಜು.10): ಋುತುಮಾನದ ವಿವಿಧ ಕಾರಣಗಳಿಂದ ದೇಶಾದ್ಯಂತ ಟೊಮೆಟೋ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಟೊಮೆಟೋ ಕದಿಯುವವರ ಸಂಖ್ಯೆಯೂ ಏರಿಕೆಯಾಗಿದೆ. ಗ್ರಾಹಕರಿಂದ ತನ್ನ ಬೆಲೆಬಾಳುವ ಟೊಮೆಟೋಗಳನ್ನು ರಕ್ಷಿಸಿಕೊಳ್ಳಲು ಉತ್ತರ ಪ್ರದೇಶದ ವಾರಾಣಸಿಯ ತರಕಾರಿ ವ್ಯಾಪಾರಿಯೊಬ್ಬ ತನ್ನ ಅಂಗಡಿಯಲ್ಲಿ ಇಬ್ಬರು ಬೌನ್ಸರ್‌ಗಳನ್ನು ನೇಮಿಸಿಕೊಂಡಿದ್ದಾನೆ.

ಈ ಬಗ್ಗೆ ಮಾತನಾಡಿರುವ ಟೊಮೆಟೋ ವ್ಯಾಪಾರಿ ಅಜಯ್‌ ಫೌಜಿ ‘ಟೊಮೆಟೋ ಬೆಲೆ ತುಂಬಾ ಹೆಚ್ಚಾಗಿದೆ. ಹೀಗಾಗಿ ಅಂಗಡಿಗೆ ಬರುವ ಜನರು ಬೆಲೆ ಕುರಿತು ವಾಗ್ವಾದ ನಡೆಸುತ್ತಾರೆ. ಜೊತೆಗೆ ಟೊಮೆಟೋ ಕಳ್ಳತನ ಕೂಡಾ ಮಾಡುತ್ತಾರೆ. ಇದರಿಂದ ನನ್ನ ಸಿಬ್ಬಂದಿ ಕೂಡಾ ಸುಸ್ತಾಗಿ ಹೋಗಿದ್ದಾರೆ. ಹೀಗಾಗಿ ಬೇರೆ ದಾರಿ ಕಾಣದೆ ಬೌನ್ಸರ್‌ಗಳನ್ನು ನೇಮಕ ಮಾಡಿಕೊಂಡಿದ್ದೇನೆ. ವಾರಾಣಸಿಯಲ್ಲಿ ಸದ್ಯ ಟೊಮೆಟೋ ಬೆಲೆ ಕೇಜಿಗೆ 160 ರು. ಇದ್ದು ಜನರು ಕೇವಲ 50 ಮತ್ತು 100 ಗ್ರಾಂ ಟೊಮೆಟೋ ಖರೀದಿ ಮಾಡುತ್ತಿದ್ದಾರೆ’ ’ ಎಂದು ಮಾಹಿತಿ ನೀಡಿದ್ದಾರೆ.

ಹಾಸನ: ಬೆಲೆ ಏರಿಕೆ, ಹೊಲಕ್ಕೆ ನುಗ್ಗಿ ಟೊಮ್ಯಾಟೋ ಕದ್ದ ಕಳ್ಳರು..!

ಮುಂಜಾನೆ 9 ರಿಂದ ಸಂಜೆ 5 ಗಂಟೆಯವರೆಗೆ ಟೊಮೆಟೋ ಕಾಯಲು ಬೌನ್ಸರ್‌ಗಳನ್ನು ನೇಮಕ ಮಾಡಿಕೊಂಡಿರುವ ರಾಜಿ, ಅವರಿಗೆ ನೀಡುತ್ತಿರುವ ವೇತನವನ್ನು ಬಹಿರಂಗಪಡಿಸಿಲ್ಲ.

ಈ ನಡುವೆ ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ದಿನ ಟೊಮೆಟೋ ಆಕಾರದ ಕೇಕ್‌ ಕತ್ತರಿಸಿ ಬೆಲೆ ಏರಿಕೆ ಬಗ್ಗೆ ಗಮನ ಸೆಳೆದಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌, ಇದೀಗ ಬೌನ್ಸರ್‌ ನಿಯೋಜನೆ ಚಿತ್ರ ಹಂಚಿಕೊಂಡಿದ್ದು, ಬಿಜೆಪಿ ಸರ್ಕಾರ ಟೊಮೆಟೋಗೆ ಝಡ್‌ ಪ್ಲಸ್‌ ಭದ್ರತೆ ಒದಗಿಸಬೇಕು ಎಂದು ವ್ಯಂಗ್ಯವಾಡಿದ್ದಾರೆ.