* ಮೃತಪಟ್ಟತಮ್ಮ ತಂದೆಯ ಕೊನೆ ಆಸೆ ನೆರವೇರಿಸಲು ಮಕ್ಕಳಿಂದ ದಾನ* ಈದ್ಗಾಗೆ 1.5 ಕೋಟಿ ಮೌಲ್ಯದ ಭೂಮಿ ನೀಡಿದ ಹಿಂದೂ ಸೋದರಿಯರು* ಈ ಕಾರ್ಯದಿಂದ ಸಂತೋಷಗೊಂಡ ಮುಸ್ಲಿಮರು
ಕಾಶಿಪುರ(ಮೇ.06): ಮೃತಪಟ್ಟತಮ್ಮ ತಂದೆಯ ಕೊನೆ ಆಸೆ ನೆರವೇರಿಸಲು ಉತ್ತರಾಖಂಡದ ಇಬ್ಬರು ಹಿಂದು ಸೋದರಿಯರು ಸುಮಾರು 1.5 ಕೋಟಿ ರು. ಮೌಲ್ಯದ 4 ಬಿಘಾ(ಸುಮಾರು ಮುಕ್ಕಾಲು ಎಕರೆ)ದಷ್ಟುಭೂಮಿಯನ್ನು ಈದ್ಗಾಗೆ ದಾನ ಮಾಡಿದ್ದಾರೆ. ಈ ಕಾರ್ಯದಿಂದ ಸಂತೋಷಗೊಂಡ ಮುಸ್ಲಿಮರು ಈದ್ ದಿನದಂದು ಮೃತ ವ್ಯಕ್ತಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬ್ರಜೇಂದ್ರನ್ ಪ್ರಸಾದ್ ರಸ್ತೋಗಿ ಎಂಬ ವ್ಯಕ್ತಿ ಸುಮಾರು 20 ವರ್ಷಗಳ ಹಿಂದೆ ಮೃತ ಪಟ್ಟಿದ್ದರು. ಈ ಸಮಯದಲ್ಲಿ ಅವರು ತಮ್ಮ ಹತ್ತಿರ ಸಂಬಂಧಿಯ ಜೊತೆ ತಮ್ಮ 4 ಬಿಘಾಗಳಷ್ಟುಭೂಮಿಯನ್ನು ಈದ್ಗಾಗೆ ದಾನ ಮಾಡುವ ಆಸೆಯ ಬಗ್ಗೆ ಹೇಳಿಕೊಂಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅವರ ಮಕ್ಕಳಾದ ಸರೋಜ್ ಮತ್ತು ಅನಿತಾ ಆ ಭೂಮಿಯನ್ನು ದಾನ ಮಾಡಿದ್ದಾರೆ. ಕೋಮು ಗಲಭೆಯ ವರದಿಗಳ ನಡುವೆ ಈ ಸಹೋದರಿಯರ ನಡೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ತಂದೆಯ ಕೊನೆಯ ಆಸೆಯನ್ನು ನೆರವೇರಿಸುವುದು ಮಕ್ಕಳ ಕರ್ತವ್ಯ. ನನ್ನ ಸೋದರಿಯರ ಕಾರ್ಯದಿಂದ ತಂದೆಯ ಆತ್ಮಕ್ಕೆ ಶಾಂತಿ ಲಭಿಸಲಿದೆ ಎಂದು ಮೃತರ ಪುತ್ರ ರಾಕೇಶ್ ರಸ್ತೋಗಿ ಹೇಳಿದ್ದಾರೆ.
ಮಥುರಾ ಮಸೀದಿ: ಮೇ.19ಕ್ಕೆ ತೀರ್ಪು
ಕೃಷ್ಣ ಜನ್ಮಭೂಮಿ ಮಥುರಾದ ದೇವಾಲಯದ ಪಕ್ಕದಲ್ಲಿರುವ ಮಸೀದಿಯನ್ನು ತೆರವು ಮಾಡಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ ತೀರ್ಪನ್ನು ಮೇ 19ಕ್ಕೆ ಕಾಯ್ದಿರಿಸಿದೆ. ದೇವಾಲಯದ ಬಳಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಬೇಕು ಎಂದು ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಈ ತೀರ್ಪು ಪ್ರಕರಣದ ಮೊದಲ ಮೊಕದ್ದಮೆಯನ್ನು ಕೃಷ್ಣನ ಸ್ನೇಹಿತ ಎಂದು ಹೇಳಿಕೊಂಡಿರುವ ಲಖನೌ ನಿವಾಸಿ ರಂಜನಾ ಅಗ್ನಿಹೋತ್ರಿ ಅವರು ಸಲ್ಲಿಸಿದ್ದಾರೆ. ಈ ಪ್ರಕರಣದ ಮೂರು ಮೊಕದ್ದಮೆಗಳಲ್ಲಿ 2ನೇಯದನ್ನು ಹಿಂದೂ ಸೇನಾ ಮುಖ್ಯಸ್ಥ ಮನೀಶ್ ಯಾದವ್ ಮತ್ತು 3ನೇಯದನ್ನು ಐವರು ಫಿರ್ಯಾದುದಾರರು ವಕೀಲರಾದ ಮಹೇಂದ್ರ ಪ್ರತಾಪ್ ಸಿಂಗ್ ಅವರ ಮೂಲಕ ಸಲ್ಲಿಸಿದ್ದಾರೆ.
ಈ ಎಲ್ಲಾ ಅರ್ಜಿಗಳು ಮೊಘಲ್ ಚಕ್ರವರ್ತಿ ಔರಂಗಜೇಜ್ ಆದೇಶದ ಮೇಲೆ ಕೃಷ್ಣ ದೇವಸ್ಥಾನದ ಬಳಿ 13.37 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಮಸೀದಿಯನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿವೆ. ಎರಡೂ ಕಡೆಯ ವಾದಗಳು ಗುರುವಾರ ಮುಕ್ತಾಯವಾಗಿದ್ದು ತೀರ್ಪನ್ನು ಕಾಯ್ದಿರಿಸಲಾಗಿದೆ.
