ಆಗ್ರಾ(ಅ.27): ಇಲ್ಲಿನ ವಿಶ್ವಪ್ರಸಿದ್ಧ ಅಮರಪ್ರೇಮ ಸ್ಮಾರಕ ತಾಜ್‌ ಮಹಲ್‌ ಆವರಣದಲ್ಲಿ ಭಾನುವಾರ ಹಿಂದೂ ಜಾಗರಣ ಮಂಚ್‌ ಮುಖಂಡರು ಗಂಗಾಜಲ ಪ್ರೋಕ್ಷಿಸಿ, ಕೇಸರಿ ಧ್ವಜ ಹಾರಿಸಿದ ಘಟನೆ ನಡೆದಿದೆ. ಇವರು ಧ್ವಜ ಹಾರಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

ಹಿಂದೂ ಜಾಗರಣ ಮಂಚ್‌ನ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗೌರವ್‌ ಠಾಕೂರ್‌ ಹಾಗೂ ಇಬ್ಬರು ಬೆಂಬಲಿಗರು ಭಾನುವಾರ ಮಧ್ಯಾಹ್ನ 12 ಗಂಟೆಗೆ ಪೂರ್ವ ಗೇಟ್‌ ಮೂಲಕ ತಾಜ್‌ ಆವರಣ ಪ್ರವೇಶಿಸಿದ್ದಾರೆ. ಬಳಿಕ ಕಿಸೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಗಂಗಾಜಲ ಪ್ರೋಕ್ಷಿಸಿ, ಕೇಸರಿಧ್ವಜ ಹಾರಿಸಿದ್ದಾರೆ.

ಕೂಡಲೇ ಇದನ್ನು ಗಮನಿಸಿದ ತಾಜ್‌ನ ಸಿಐಎಸ್‌ಎಫ್‌ ಭದ್ರತಾ ಸಿಬ್ಬಂದಿ ಇವರನ್ನು ವಶಕ್ಕೆ ಪಡೆದು ಇಲ್ಲಿ ‘ಇಲ್ಲಿ ಇಂತಹ ಚಟುವಟಿಕೆ ನಿರ್ಬಂಧಿಸಲಾಗಿದೆ’ ಎಂದು ಎಚ್ಚರಿಸಿದ್ದಾರೆ. ಆಗ ಠಾಕೂರ್‌, ‘ತಾಜ್‌ನಲ್ಲಿ ನಮಾಜ್‌ ಕೂಡ ಮಾಡಲಾಗುತ್ತದೆ. ಆದರೆ ನಾನು ‘ತೇಜೋ ಮಹಾಲಯ’ಕ್ಕೆ ಪೂಜೆ ಸಲ್ಲಿಸಲು ಬಂದಿದ್ದೆ’ ಎಂದು ವಾದಿಸಿದ್ದಾನೆ.

ಕೊನೆಗೆ 1 ತಾಸು ವಿಚಾರಣೆ ಬಳಿಕ ಇವರನ್ನು ಬಿಡುಗಡೆ ಮಾಡಲಾಗಿದೆ.

ಶಹಜಹಾನ್‌ ನಿರ್ಮಿಸಿದ ಈ ಸ್ಮಾರಕ ‘ತೇಜೋ ಮಹಾಲಯ’. ಇಲ್ಲಿ ಶಿವಲಿಂಗ ಕೂಡ ಇತ್ತು ಎಂದು ಕೆಲವು ಬಿಜೆಪಿ, ಶಿವಸೇನೆ ಹಾಗೂ ಹಿಂದೂ ಸಂಘಟನೆಗಳ ವಾದವಾಗಿದೆ.

2008ರಲ್ಲಿ ಶಿವಸೈನಿಕರು ಇಲ್ಲಿ ಪರಿಕ್ರಮ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದ್ದು ವಿವಾದಕ್ಕೀಡಾಗಿತ್ತು.