ಕುಲ್ಲೂ[ಸೆ.19]: ದೇಶದಲ್ಲಿ ಅಭಿವೃದ್ಧಿಯ ಚರ್ಚೆಯಾಗುತ್ತಿದೆ. ರಸ್ತೆಗಳ ನಿರ್ಮಾಣ ನಡೆಯುತ್ತಿದೆ. ದೊಡ್ಡ ದೊಡ್ಡ ಫ್ಲೈ ಓವರ್ ನಿರ್ಮಾಣಗೊಳ್ಳುತ್ತಿವೆ. ಅಮೆರಿಕಾ ರಾಷ್ಟ್ರಪತಿಯೂ ಭಾರತ ಪ್ರವಾಸಕ್ಕೆ ಬರುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಹಿಮಾಚಲ ಪ್ರದೇಶದ ಕುಲ್ಲೂನಲ್ಲಿ ಆಸ್ಪತ್ರೆ ಹಾಗೂ ರಸ್ತೆಗಳಿಲ್ಲದ ಕಾರ,ಣ ಹಳ್ಳಿಯ ಮಹಿಳೆಯರು ಗರ್ಭಿಣಿ ಮಹಿಳೆಯನ್ನು ಕುರ್ಚಿಯೊಂದರಲ್ಲಿ ಕುಳ್ಳಿರಿಸಿ ಬರೋಬ್ಬರಿ 18 ಕಿ. ಮೀಟರ್ ಕಾಲ್ನಡಿಗೆಯಲ್ಲೇ ಹೊತ್ತುಕೊಂಡು ಾಸ್ಪತ್ರೆಗೆ ದಾಖಲಿಸಿದ್ದಾರೆ.

ಏನಿದು ಪ್ರಕರಣ?

ಟೈಮ್ಸ್ ಆಫ್ ಇಂಡಿಯಾ ವರದಿಯನ್ವಯ ಈ ಘಟನೆ ಕುಲ್ಲೂವಿನ ಶಕ್ಟೀಯಲ್ಲಿ ಭಾನುವಾರ ನಡೆದಿದೆ. ಇಲ್ಲಿನ 27 ವರ್ಷದ ಸುನಿತಾ ಎಂಬ ಗರ್ಭಿಣಿ ಮಹಿಳೆಗೆ ಸುಮಾರು 10 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಿರುವಾಗ ಸುನೀತಾ ಗಂಡ ಹಾಗೂ ಕುಟುಂಬ ಸದಸ್ಯರಿಗೆ ಆಕೆಯನ್ನು ಆಸ್ಪತ್ರೆಗೆ ಹೇಗೆ ಕರೆದೊಯ್ಯಬೇಕೆಂಬ ಚಿಂತೆ ಶುರುವಾಗಿದೆ. ಬಳಿಕ ಕುಟುಂಬ ಸದಸ್ಯರು ಗ್ರಾಮಸ್ಥರ ಬಳಿ ಸಹಾಯ ಕೋರಿದ್ದಾರೆ. 

ಈ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ಸಹಾಯಕ್ಕೆ ಧಾವಿಸಿದ್ದಾರೆ. ಕುರ್ಚಿಯೊಂದರಲ್ಲಿ ಸುನೀತಾರನ್ನು ಕುಳ್ಳಿರಿಸಿದ ಗ್ರಾಮಸ್ಥರು ಆಕೆ ಬೀಳದಂತೆ ಮರದ ತುಂಡುಗಳನ್ನು ಕಟ್ಟಿ, ಆಕೆಯನ್ನು ಹೊತ್ತುಕೊಂಡು ಆಸ್ಪತ್ರೆಯೆಡೆ ಹೆಜ್ಜೆ ಹಾಕಿದ್ದಾರೆ.

7 ಗಂಟೆ ಕಾಲ್ನಡಿಗೆಯಲ್ಲೇ ಹೊತ್ತು ಸಾಗಿದರು

ಸುನೀತಾಳನ್ನು ಆಸ್ಪತ್ರೆಗೆ ಸಾಗಿಸಲು ಹಳ್ಳಿಯ ಮಹಿಳೆಯರೂ ಮುಂದಾಗಿದ್ದಾರೆ. ಎಲ್ಲರೂ ಸೇರಿ ಗರ್ಭಿಣೀ ಮಹಿಳೆಯನ್ನು ಎತ್ತಿ, ಹೊತ್ತುಕೊಂಡು ಸಾಗಿದ್ದಾರೆ. ಗುಡ್ಡ ಗಾಡು ಪ್ರದೇಶದಲ್ಲಿ ಬರೋಬ್ಬರಿ 7 ಗಂಟೆ ಸುನೀತಾರನ್ನು ಒಬ್ಬರಾದ ಬಳಿಕ ಮತ್ತೊಬ್ಬರಂತೆ ಹೊತ್ತು ಹೆಜ್ಜೆ ಹಾಕಿ, ಆಸ್ಪತ್ರೆಗೆ ತಲುಪಿಸಿದ್ದಾರೆ.