ಹಿಮಾಚಲ ಮೇಘಸ್ಪೋಟ, 50 ಜನ ನಾಪತ್ತೆ: ಹೆಲಿಕಾಪ್ಟರ್ ಮೂಲಕ 10,500 ಯಾತ್ರಿಕರ ರಕ್ಷಣೆ
ಹಿಮಾಚಲ ಪ್ರದೇಶದ ಕುಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆ ಆಗಿದ್ದ ಸುಮಾರು 50 ಜನರು ಸಾವನ್ನಪ್ಪಿರಬಹುದು ಎಂದ ಹಿಮಾಚಲ ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
ಶಿಮ್ಲಾ: ಹಿಮಾಚಲ ಪ್ರದೇಶದ ಕುಲು, ಮಂಡಿ ಹಾಗೂ ಶಿಮ್ಲಾ ಜಿಲ್ಲೆಗಳಲ್ಲಿ ಸಂಭವಿಸಿದ ಮೇಘಸ್ಫೋಟದಲ್ಲಿ ನಾಪತ್ತೆ ಆಗಿದ್ದ ಸುಮಾರು 50 ಜನರು ಸಾವನ್ನಪ್ಪಿರಬಹುದು ಎಂದ ಹಿಮಾಚಲ ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ. ಶನಿವಾರ ಮಾತನಾಡಿದ ಸಿಂಗ್, ದುರಂತದಲ್ಲಿ ನಾಪತ್ತೆ ಆದ 50 ಜನರು ಸಾವನ್ನಪ್ಪಿರುವ ಸಾಧ್ಯತೆಗಳಿವೆ. ಆದರೆ ನಿಖರ ಅಂಕಿ ಅಂಶ, ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಗೊತ್ತಾಗಲಿದೆ ಎಂದರು.
ಮೇಘಸ್ಫೋಟದಿಂದ ಅಪಾರ ಆಸ್ತಿಪಾಸ್ತಿಗಳು ನಷ್ಟವಾಗಿದ್ದು, ಸಂತ್ರಸ್ತರ ಕುಟುಂಬಗಳಿಗೆ ಸಿಎಂ ಸುಖವಿಂದರ್ ಸಿಂಗ್ 50 ಸಾವಿರ ರು. ಪರಿಹಾರ ಘೋಷಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಆ.7ರತನಕ ಮಳೆ ಮುಂದುವರೆಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೇರಳದ ವಯನಾಡು ದುರಂತದ ಬೆನ್ನಲ್ಲೇ ಹಿಮಾಚಲ ಪ್ರದೇಶದಲ್ಲಿ ಮೇಘ ಸ್ಫೋಟದಿಂದ ಜಲಪ್ರಳಯ ಸಂಭವಿಸಿ, ಪ್ರಾಣಹಾನಿ ಹಾಗೂ ಹಲವು ಅನಾಹುತಗಳು ಸಂಭವಿಸಿರ್ಧದ್ದವು.
ಕೇದಾರನಾಥದಲ್ಲಿ ಮಳೆಗೆ ಸಿಲುಕಿದ್ದ 10,500 ಜನರ ರಕ್ಷಣೆ
ಉತ್ತರಾಖಂಡದ ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರನಾಥ್ ಯಾತ್ರೆಗೆ ತೆರಳುವ ಹಂತದಲ್ಲಿ ವಿವಿಧೆಡೆ ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿರುವ ಯಾತ್ರಾರ್ಥಿಗಳ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 10,500ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇದರಲ್ಲಿ ಕೆಲವರನ್ನು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ರಕ್ಷಿಸಲಾಗಿದೆ. ಕೇದರನಾಥ, ಭೀಮಾಲಿ ಮತ್ತು ಗೌರಿಕುಂಡದಲ್ಲಿ ಸುಮಾರು 1,300 ಯಾತ್ರಿಕರು ಸಿಲುಕಿಕೊಂಡಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಮ್ಮಿ… 10 ನಿಮಿಷದಲ್ಲಿ ಬಂದೆ ಅಂತ ಮುಂದೆ ಹೋಗ್ತಿದ್ದಂತೆ ಸಾವು, ಒಣಹುಲ್ಲಿನಂತೆ ಮಳೆ ನೀರಿನಲ್ಲಿ ಮುಳುಗಿದ ಬಾಲಕ!
ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳು ಯತ್ರಾರ್ಥಿಗಳನ್ನು ರಕ್ಷಿಸಲು ಶ್ರಮಿಸುತ್ತಿದ್ದು, ಭಾರತೀಯ ವಾಯುಪಡೆಯ ಚಿನೋಕ್ ಮತ್ತು ಎಂಐ17 ಹೆಲಿಕಾಪ್ಟರ್ ಕೂಡಾ ಕೈಜೋಡಿಸಿದ್ದು ತ್ವರಿತ ನೆರವು ಲಭಿಸಲು ಸಾಧ್ಯವಾಗಿದೆ. ರುದ್ರಪ್ರಯಾಗದ ವರಿಷ್ಠಾಧಿಕಾರಿ ವಿಶಾಖ ಅಶೋಕ್ ಭದನೆ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಕರು ಕಾಣೆಯಾಗಿದ್ದಾರೆ ಎಂಬ ವದಂತಿಗಳನ್ನು ನಂಬಬೇಡಿ. ಇಲ್ಲಿ ಮೊಬೈಲ್ ಸಿಗ್ನಲ್ ಸಿಗದ ಕಾರಣ ಕೆಲವು ಯಾತ್ರಿಕರು ತಮ್ಮ ಕುಟುಂಬಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರನ್ನು ಸುರಕ್ಷಿತವಾಗಿ ಕಾಪಾಡಲಾಗುತ್ತದೆ ಎಂದು ಹೇಳಿದ್ದಾರೆ.
ದೇವರ ನಾಡಲ್ಲಿ ರಕ್ಕಸನಾಗಿ ಮೆರೆದ ಪ್ರವಾಹಕ್ಕೆ ಕಾರಣ ರಿವೀಲ್! ಕೇರಳಕ್ಕೆ ಅರಿವಾಗುವುದೇ ತನ್ನ ತಪ್ಪು ನಿರ್ಧಾರ!