ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಹತ್ತು ತಿಂಗಳ ಕೂಸು ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದು, ಕುಟುಂಬದ ಇತರ ಸದಸ್ಯರು ನಾಪತ್ತೆಯಾಗಿದ್ದಾರೆ. ಮಗುವಿನ ತಂದೆ ಪ್ರವಾಹದ ನೀರನ್ನು ತಿರುಗಿಸಲು ಹೋದಾಗ ದುರ್ಘಟನೆ ಸಂಭವಿಸಿದೆ. ಮಗುವನ್ನು ನೆರೆಮನೆಯವರು ರಕ್ಷಿಸಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ತಲ್ವಾರಾ ಗ್ರಾಮದಲ್ಲಿ ಈ ವಾರದ ಆರಂಭದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದಲ್ಲಿ ಪವಾಡ ಸದೃಶ ರೀತಿಯಲ್ಲಿ ಹತ್ತು ತಿಂಗಳ ಕೂಸು ಬದುಕಿದ್ದು, ಆ ಮಗುವಿನ ಕುಟುಂಬದವರೆಲ್ಲಾ ಮಿಸ್ ಆಗಿದ್ದಾರೆ. ಮಗು ನೀತಿಕಾ ಅವರ ಕುಟುಂಬದಲ್ಲಿ ಬದುಕುಳಿದ ಏಕೈಕ ಸದಸ್ಯೆ ಎಂದು ನಂಬಲಾಗಿದ್ದು, ಮೇಘಸ್ಫೋಟ ಸಂಭವಿಸಿದಾಗ ಮುಗುವಿನ ತಂದೆ, 31 ವರ್ಷದ ರಮೇಶ್ ಕುಮಾರ್, ತಮ್ಮ ಮನೆಯಿಂದ ಪ್ರವಾಹದ ನೀರನ್ನು ಬೇರೆಡೆಗೆ ತಿರುಗಿಸುವ ಸಲುವಾಗಿ ಹೊರಗೆ ಬಂದಿದ್ದರು. ಈ ವೇಳೆ ದುರ್ಘಟನೆ ನಡೆದು ಹೋಯ್ತು. ಬಳಿಕ ಅವರ ದೇಹವನ್ನು ಅವಶೇಷಗಳಿಂದ ಮೇಲಕ್ಕೆತ್ತಲಾಯ್ತು.
ಕಳೆದ ಮಂಗಳವಾರ ಈ ಘಟನೆ ನಡೆದಾಗ ನೀತಿಕಾ ಅವರ ತಾಯಿ ರಾಧಾ ದೇವಿ (24) ಮತ್ತು ಅಜ್ಜಿ ಪೂರ್ಣು ದೇವಿ (59) ರಮೇಶ್ ಅವರನ್ನು ಹುಡುಕಲು ಹೋಗಿದ್ದರು ಈ ವೇಳೆ ಅವರು ಕೂಡ ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಇನ್ನೂ ಕೂಡ ಮುಂದುವರೆದಿದೆ.
ಮಗು ಒಂಟಿಯಾಗಿ ಅವಶೇಷಗಳಲ್ಲಿ ಅಳುತ್ತಿರುವುದನ್ನು ನೆರೆಮನೆಯ ಪ್ರೇಮ್ ಸಿಂಗ್ ಕಂಡು, ಆಕೆಯನ್ನು ರಮೇಶ್ ಅವರ ಸೋದರ ಸಂಬಂಧಿ ಬಲವಂತ್ ಅವರ ಬಳಿ ಕರೆದುಕೊಂಡು ಹೋದರು. ಬಲವಂತ್, ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.
ಪಿಟಿಐಗೆ ಮಾಹಿತಿ ನೀಡಿರುವ ಬಲವಂತ್ ಮಗು ಈಗ ನಮ್ಮೊಂದಿಗೆ ಸುರಕ್ಷಿತವಾಗಿದ್ದು, ಸ್ಥಳೀಯ ಅಧಿಕಾರಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಕೂಡ ನಾಳೆಯೊಳಗೆ ಮಗುವಿನ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯುವುದಾಗಿ ಭರವಸೆ ನೀಡಿದ್ದಾರೆ. ದುರಂತದ ಬಗ್ಗೆ ತಿಳಿದ ಬಳಿಕ ಬಹಳಷ್ಟು ಕರೆಗಳು ಬರುತ್ತಿವೆ. ಜೊತೆಗೆ ಜನರು ಕೂಡ ಮಗುವಿಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಮೇಘಸ್ಫೋಟದಿಂದ ತೀವ್ರವಾಗಿ ಹಾನಿಗೊಳಗಾದ ಹಳ್ಳಿಗಳಲ್ಲಿ ತಲ್ವಾರವೂ ಒಂದಾಗಿದೆ. ಪವಾರ್, ತುನಾಗ್, ಬೈದ್‌ಶಾದ್, ಕಾಂಡಾ ಮತ್ತು ಮುರಾದ್ ಹಳ್ಳಿಗಳೂ ದೊಡ್ಡ ಹಾನಿಗೆ ಒಳಗಾಗಿವೆ. ಈ ಪ್ರದೇಶದಾದ್ಯಂತ ರಸ್ತೆಗಳು, ನೀರಿನ ಸಂಪರ್ಕಗಳು, ವಿದ್ಯುತ್ ಮೂಲಸೌಕರ್ಯಗಳು ವ್ಯಾಪಕ ಹಾನಿಗೊಳಗಾಗಿವೆ. ಮಂಡಿ ಜಿಲ್ಲೆಯಾದ್ಯಂತ ಈವರೆಗೂ ಹತ್ತು ಪ್ರತ್ಯೇಕ ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳ ಘಟನೆಗಳಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ನಾಪತ್ತೆಯಾಗಿರುವ 31 ವ್ಯಕ್ತಿಗಳಿಗಾಗಿ ರಕ್ಷಣಾ ತಂಡಗಳು ಇನ್ನೂ ಹುಡುಕಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಮೇಶ್ ಕೂಡ ಮಗುವಾಗಿದ್ದಾಗ ತನ್ನ ತಂದೆಯನ್ನು ಕಳೆದುಕೊಂಡಿದ್ದರು ಎಂದು ಸಂಬಂಧಿ ಬಲ್ವಂತ್ ನೆನಪಿಸಿಕೊಂಡಿದ್ದಾರೆ. ಸಣ್ಣ ಪ್ರಮಾಣದ ರೈತನಾಗಿದ್ದ ರಮೇಶ್, ಸರ್ಕಾರಿ ಶಾಲೆಯಲ್ಲಿ ಪ್ಯೂನ್ ಆಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಏಳು ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದ ತನ್ನ ತಾಯಿ ಪೂರ್ಣು ದೇವಿಯ ಆದಾಯದ ಮೇಲೆ ಹೆಚ್ಚು ಅವಲಂಬಿತನಾಗಿದ್ದರು ಎಂದು ವರದಿ ತಿಳಿಸಿದೆ. ಸ್ಥಳೀಯ ಅಧಿಕಾರಿಗಳು ನೀತಿಕಾ ಅವರ ಸಂಬಂಧಿಕರಿಗೆ ತುರ್ತು ಆರೈಕೆಗಾಗಿ 25,000 ರೂ.ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
