Asianet Suvarna News Asianet Suvarna News

Hijab Controversy ಪಿಎಫ್‌ಐನ ಬಹುದೊಡ್ಡ ಪಿತೂರಿ: ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರ ವಾದ

ಹಿಜಾಬ್‌ ವಿವಾದ ಪಿಎಫ್‌ಐನ ಬಹುದೊಡ್ಡ ಪಿತೂರಿ, ನಮ್ಮ ನಿರ್ಬಂಧ ಹಿಜಾಬ್‌ಗಷ್ಟೇ ಅಲ್ಲ, ಕೇಸರಿ ಶಾಲಿಗೂ ಇದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ರಾಜ್ಯ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ ವಾದ ಮಾಡಿದ್ದಾರೆ. ಹಿಜಾಬ್‌ ಧರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆದಿದೆ ಎಂದೂ ಹೇಳಿದೆ. 

hijab campaign instigated by pfi karnataka government to apex court ash
Author
First Published Sep 21, 2022, 9:52 AM IST

ನವದೆಹಲಿ: ಹಿಜಾಬ್‌ ಪ್ರಕರಣ (Hijab Case) ಬಹುದೊಡ್ಡ ಪಿತೂರಿಯಾಗಿದ್ದು, ಇದರ ಹಿಂದೆ ಪಿಎಫ್‌ಐ (Popular Front of India) (PFI) ಸಂಘಟನೆ ಇದೆ. ಧಾರ್ಮಿಕ ಸಾಮರಸ್ಯವನ್ನು ಕದಡಿ ಆಂದೋಲನ ಸೃಷ್ಟಿ ಮಾಡುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಹಿಜಾಬ್‌ ಚಳವಳಿ ಪ್ರಾರಂಭಿಸಿ ಬಳಿಕ ಶಿಕ್ಷಣ ಸಂಸ್ಥೆಗಳಲ್ಲಿ ಮುಂದುವರಿಸಲಾಗಿತ್ತು ಎಂದು ರಾಜ್ಯ ಸರ್ಕಾರದ ಪರ ಸಾಲಿಸಿಟರ್‌ ಜನರಲ್‌ (Solicitor General) ತುಷಾರ್‌ ಮೆಹ್ತಾ ಅವರು ಸುಪ್ರೀಂ ಕೋರ್ಟಿನಲ್ಲಿ ವಾದಿಸಿದ್ದಾರೆ. ಸತತ 8 ದಿನಗಳಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಹಿಜಾಬ್‌ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಅರ್ಜಿದಾರರ ಪರವಾಗಿ ಸತತ 8 ದಿನಗಳ ಕಾಲ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌, ದುಷ್ಯಂತ್‌ ದವೆ, ದೇವದತ್‌ ಕಾಮತ್‌, ಸಲ್ಮಾನ್‌ ಖುರ್ಷಿದ್‌ ಸೇರಿ 17 ವಕೀಲರು ವಾದ ಮಂಡಿಸಿದರು.

ಮಂಗಳವಾರ ರಾಜ್ಯ ಸರ್ಕಾರದ ಪರ ತುಷಾರ್‌ ಮೆಹ್ತಾ ವಾದ ಮಂಡಿಸಿ, ಆಂದೋಲನ ರೂಪಿಸುವ ಉದ್ದೇಶದಿಂದಲೇ ಹಿಜಾಬ್‌ ಹೋರಾಟ ರೂಪಿಸಲಾಗಿತ್ತು. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ಪಿಎಫ್‌ಐ ಇದರ ಭಾಗ ಆಗಿತ್ತು. ಇದು ಸ್ವಯಂಪ್ರೇರಿತ ಕೃತ್ಯವಾಗಿರಲಿಲ್ಲ. ಹಿಜಾಬ್‌ ಧರಿಸಲು ಪ್ರಾರಂಭಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸಂದೇಶಗಳನ್ನು ರವಾನಿಸಲಾಗಿತ್ತು. ಮಕ್ಕಳು ಕೂಡ ಅವರ ಸಲಹೆಯಂತೆ ವರ್ತಿಸಿದರು. ಜೊತೆಗೆ ಈ ಸಂಬಂಧ ಕೆಲವು ದಾಖಲೆಗಳನ್ನು ಕವರ್‌ನಲ್ಲಿ ಪೀಠಕ್ಕೆ ಸಲ್ಲಿಸಿದ್ದೇನೆ. ಇನ್ನು 2021ರ ತನಕ ಯಾವುದೇ ವಿದ್ಯಾರ್ಥಿನಿ ಹಿಜಾಬ್‌ ಧರಿಸಿರಲಿಲ್ಲ. ಆಗ ಹಿಜಾಬ್‌ ಕುರಿತಾಗಿ ಪ್ರಶ್ನೆಗಳು ಉದ್ಬವಿಸಿರಲಿಲ್ಲ ಎಂದು ನ್ಯಾಯಪೀಠದ ಮುಂದೆ ವಿವರಿಸಿದರು.

ಇದನ್ನು ಓದಿ: ಮುಸ್ಲಿಂ ದೇಶ ಇರಾನ್‌ನಲ್ಲಿ ಮಹಿಳೆಯರು ಹಿಜಾಬ್‌ ವಿರುದ್ಧ ಪ್ರತಿಭಟಿಸ್ತಿದ್ದಾರೆ, ಇದು ಅಗತ್ಯ ಆಚರಣೆಯಲ್ಲ: ಎಸ್‌ಜಿ

ಕೇಸರಿ ಶಾಲಿಗೂ ನಿರ್ಬಂಧ:
ಯಾವುದೇ ಧರ್ಮಾಚರಣೆ ಇದ್ದರೂ ಅದರ ಅನುಸರಣೆ ಮತ್ತು ಅನುಕರಣೆ ಕಾನೂನಿನ ಮಿತಿಯಲ್ಲಿದೆ. ರಾಜ್ಯ ಸರ್ಕಾರದ ಆದೇಶ ನಿರ್ದಿಷ್ಟ ಸಮುದಾಯದ ನಿರ್ದಿಷ್ಟ ಉಡುಪು ಧರಿಸಲು ನಿಯಂತ್ರಣ ಹೇರುವುದಿಲ್ಲ. ಬದಲಿಗೆ ಸಮವಸ್ತ್ರದ (Uniform) ಅಗತ್ಯದ ಬಗ್ಗೆ ಹೇಳಿದೆ. ಕರ್ನಾಟಕ ಸರ್ಕಾರ ಕೇವಲ ಹಿಜಾಬ್‌ ಧರಿಸುವುದಕ್ಕೆ ಮಾತ್ರ ನಿರ್ಬಂಧ ವಿಧಿಸಿದೆ ಎನ್ನುವುದು ಅಪಚಾರವಾಗುತ್ತದೆ. ಇತರೆ ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು (Saffron Shawl) ಧರಿಸಿ ಬರುವುದಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂದರು.

ಇದಕ್ಕೂ ಮೊದಲು ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್‌ ದವೆ, ಸಮವಸ್ತ್ರ ಸಮಾಜದ ಬಹುಪಾಲು ವರ್ಗದ ಮೇಲೆ ಅನಗತ್ಯ ಹೊರೆ. ಅನೇಕ ಜನರ ಬಳಿ ಸಮವಸ್ತ್ರ ಖರೀದಿಸಲು ಹಣವಿಲ್ಲ ಎಂದರು. ಇದೇ ವೇಳೆ ಪ್ರಶ್ನಿಸಿದ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಅಸಮಾನತೆ ತಪ್ಪಿಸಲು ಸಮವಸ್ತ್ರ ಅಗತ್ಯ. ಇಲ್ಲಿ ಬಡವರು, ಶ್ರೀಮಂತ ಎಂದು ಎಣಿಸಲು ಸಾಧ್ಯವಿಲ್ಲ ಎಂದೂ ಹೇಳಿದರು.

ಇದನ್ನೂ ಓದಿ: Hijab Case: ಹಿಜಾಬ್‌ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು!

ಇನ್ನು ಹಿಜಾಬ್‌ ಧರಿಸಿದ ಮಹಿಳೆಯರು ಯಾರ ಹಕ್ಕುಗಳನ್ನು ಉಲ್ಲಂಫಿಸುತ್ತಾರೆ ಎಂದು ದೇವದತ್‌ ಅವರು ಪೀಠದ ಮುಂದೆ ವಾದ ಇಟ್ಟರು. ಅಲ್ಲದೇ 75 ವರ್ಷಗಳ ಬಳಿಕ ರಾಜ್ಯವು ಏಕಾಏಕಿ ಈ ನಿರ್ಬಂಧವನ್ನು ಹೇರಿದ್ದು ಏಕೆ ? ಅಲ್ಪಸಂಖ್ಯಾತರನ್ನು ಕಡೆಗಣಿಸುವ ಉದ್ದೇಶ ಇತ್ತು ಎಂದರು. ಹಾಗೂ, ಶಾಲಾ ಮಕ್ಕಳು ಕಟ್ಟುನಿಟ್ಟು ಶಿಸ್ತು ಇರುವ ರೆಜಿಮೆಂಟ್‌ ಪಡೆಗಳ ಭಾಗವಲ್ಲ ಎಂದೂ ಸುಪ್ರೀಂಕೋರ್ಟ್‌ ಪೀಠದ ಮುಂದೆ ವಾದ ಮಂಡಿಸಿದರು. ಕರ್ನಾಟಕ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಕೂಡ ವಾದ ಮಂಡಿಸಿದರು. ಬಳಿಕ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಲಾಯಿತು.

Follow Us:
Download App:
  • android
  • ios