* ಚಾರಧಾಮ್‌ ಯಾತ್ರೆ ವೇಳೆ ಈ ವರ್ಷ 91 ಯಾತ್ರಾರ್ಥಿಗಳ ಸಾವು* ಸಾವಿನ ಪ್ರಮಾಣ ಈ ಬಾರಿ ಗರಿಷ್ಠ* ಯಾತ್ರಿಕರಲ್ಲಿ ಅನೇಕರು ಕೋವಿಡ್‌ನಿಂದ ಗುಣವಾದವರು* ಕೋವಿಡ್‌ನಿಂದಾಗಿ ತಗ್ಗಿದ ನಿರೋಧಕ ಶಕ್ತಿ ಸಾವಿಗೆ ಕಾರಣ: ತಜ್ಞರು

ಡೆಹ್ರಾಡೂನ್‌(ಮೇ.28): ಮೇ 3ರಿಂದ ಆರಂಭವಾದ ಚಾರ್‌ಧಾಮ್‌ ಯಾತ್ರೆಯಲ್ಲಿ ಈವರೆಗೆ ಒಟ್ಟು 91 ಯಾತ್ರಾರ್ಥಿಗಳು ಸಾವಿಗೀಡಾಗಿದ್ದಾರೆ ಎಂಬ ಕಳವಳಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಳೆದ ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮೃತಪಟ್ಟಯಾತ್ರಾರ್ಥಿಗಳ ಸಂಖ್ಯೆ ಗರಿಷ್ಠವಾಗಿದ್ದು, ಇದಕ್ಕೆ ಕೋವಿಡ್‌ನಿಂದಾಗಿ ತಗ್ಗಿದ ನಿರೋಧಕ ಶಕ್ತಿಯು ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಈ ಮೊದಲು ಚಾರ್‌ಧಾಮ್‌ ಯಾತ್ರೆಯ ವೇಳೆ 2019ರಲ್ಲಿ 90 ಯಾತ್ರಾರ್ಥಿಗಳು, 2018ರಲ್ಲಿ 102 ಹಾಗೂ 2017ರಲ್ಲಿ 112 ಯಾತ್ರಾರ್ಥಿಗಳು ಮೃತಪಟ್ಟಿದ್ದರು. ಇದು ಏಪ್ರಿಲ್‌-ಮೇ ಹಾಗೂ ಅಕ್ಟೋಬರ್‌-ನವೆಂಬರ್‌ ಎರಡೂ ಅವಧಿಯ ಒಟ್ಟಾರೆ ಯಾತ್ರಾರ್ಥಿಗಳ ಸಾವಿನ ಪ್ರಮಾಣವಾಗಿತ್ತು. ಆದರೆ ಈ ಬಾರಿ ಯಾತ್ರೆ ಆರಂಭವಾಗಿ 1 ತಿಂಗಳು ಕಳೆಯುವ ಮೊದಲೇ 91 ಜನರು ಮೃತಪಟ್ಟಿದ್ದು ತೀವ್ರ ಕಳವಳಕ್ಕೆ ಕಾರಣವಾಗಿದೆ.

ಕಾರಣ ಏನು?:

‘ಈ ಬಾರಿ ಯಾತ್ರೆಯ ವೇಳೆ ಭಕ್ತಾದಿಗಳು ಹೆಚ್ಚಾಗಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೋವಿಡ್‌ನಿಂದ ಗುಣವಾದವರು ಯಾತ್ರಿಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೋವಿಡ್‌ನಿಂದಾಗಿ ಜನರ ರೋಗ ನಿರೋಧಕ ಶಕ್ತಿಯು ಗಣನೀಯವಾಗಿ ಕ್ಷೀಣಿಸಿದೆ. ಇದು ಕೂಡಾ ಸಾವಿನ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಬಹುದು’ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

‘ಹೀಗಾಗಿ ಈ ಮೊದಲು ಕೋವಿಡ್‌ ಸೋಂಕಿಗೆ ತುತ್ತಾಗಿದ್ದವರು ಅಥವಾ ಕೋವಿಡ್‌ ನಂತರವೂ ವಿವಿಧ ಆರೋಗ್ಯ ಸಮಸ್ಯೆ ಹೊಂದಿದವರು ಯಾತ್ರೆ ಮಾಡುವುದು ಸೂಕ್ತವಲ್ಲ. ಅತ್ಯಂತ ಚಳಿ, ಎತ್ತರದ ಪ್ರದೇಶದಲ್ಲಿನ ಆಮ್ಲಜನಕದ ಕೊರತೆಯು ವಿಶೇಷವಾಗಿ ವೃದ್ಧರಿಗೆ ಕೆಲವೊಮ್ಮೆ ಮಾರಣಾಂತಿಕವಾಗಬಹುದು’ ಎಂದು ಸೂಚಿಸಿದ್ದಾರೆ.

ಚಿಕಿತ್ಸೆಗೆ ಹೆಚ್ಚಿನ ವೈದ್ಯರು:

ಈ ನಡುವೆ, ಸಾವಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ 169 ವೈದ್ಯರನ್ನು ನೇಮಕ ಮಾಡಲಾಗಿದೆ ಎಂದು ಉತ್ತರಾಖಂಡದ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.