ಚಂಡೀಗಢ(ಫೆ.01): ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದರೂ ಕುಟುಂಬ ಪಿಂಚಣಿ ಪಡೆಯಲು ಆಕೆ ಅರ್ಹಳು ಎಂದು ಪಂಜಾಬ್‌ ಮತ್ತು ಹರಾರ‍ಯಣ ಹೈಕೋರ್ಟ್‌ ತೀರ್ಪು ನೀಡಿದೆ. ಕುಟುಂಬ ಪಿಂಚಣಿ ಅಥವಾ ಫ್ಯಾಮಿಲಿ ಪೆನ್ಶನ್‌ ಎಂಬುದು ಸರ್ಕಾರಿ ಉದ್ಯೋಗಿಯ ಮರಣಾನಂತರ ಆತನ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಯೋಜನೆಯಾಗಿದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

ಬಲ್ಜಿತ್‌ ಕೌರ್‌ ಎಂಬ ಮಹಿಳೆ ಅರ್ಜಿ ವಿಚಾರಣೆ ವೇಳೆ ಜ.25 ರಂದು ಕೋರ್ಟ್‌ ಈ ತೀರ್ಪು ನೀಡಿದೆ. ಹರಾರ‍ಯಣ ಸರ್ಕಾರದಲ್ಲಿ ಉದ್ಯೋಗಿಯಾಗಿದ್ದ ಕೌರ್‌ ಪತಿ ತರ್‌ಸೆಮ್‌ ಸಿಂಗ್‌ 2008ರಲ್ಲಿ ಮೃತಪಟ್ಟಿದ್ದರು. ಕೌರ್‌ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ಬಳಿಕ 2011ರಲ್ಲಿ ಆಕೆಯ ವಿರುದ್ಧ ಆರೋಪ ಸಾಬೀತಾಗಿತ್ತು. 2011ರ ವರೆಗೆ ಕೌರ್‌ ಕುಟುಂಬ ಪಿಂಚಣಿ ಪಡೆಯುತ್ತಿದ್ದರು. ಬಳಿಕ ಪಿಂಚಣಿಯನ್ನು ತಡೆಹಿಡಿಯಲಾಗಿತ್ತು.

ಈ ಪ್ರಕರಣವನ್ನು ವಿಚಾರಣೆ ನಡೆಸಿದ ಕೋರ್ಟ್‌ 2 ತಿಂಗಳ ಒಳಗಾಗಿ ಬಾಕಿ ಪಿಂಚಣಿಯೂ ಸೇರಿದಂತೆ ಎಲ್ಲ ಹಣವನ್ನು ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿದೆ. 1972ರ ಕುಟುಂಬ ಪಿಂಚಣಿ ಯೋಜನೆ ಪ್ರಕಾರ ಪತಿಯ ಮರಣಾನಂತರ ಪತ್ನಿಯು ಪಿಂಚಣಿ ಹಣ ಪಡೆಯಲು ಅರ್ಹರಾಗಿರುತ್ತಾರೆ.