ಚೆನ್ನೈ(ಜು.25): ಹಣ ತೊಡಗಿಸಿ ಆನ್‌ಲೈನ್‌ನಲ್ಲಿ ಆಡುವಂಥ ರಮ್ಮಿ, ಇಸ್ಪೀಟ್‌ ಹಾಗೂ ಇತರ ಆಟಗಳನ್ನು ನಿಷೇಧಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾನೂನೊಂದನ್ನು ಜಾರಿಗೊಳಿಸಬಹುದಾಗಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಶುಕ್ರವಾರ ಅಭಿಪ್ರಾಯಪಟ್ಟಿದೆ.

ಸ್ನೇಹಿತರ ಜೊತೆ ಇಸ್ಪೀಟ್‌ ಆಡಿದ್ದಕ್ಕೆ ತನ್ನ ವಿರುದ್ಧ ದಾಖಲಾದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೂಡಂಕುಳಂನ ನಿವಾಸಿ ಸಿಲುವಾಯಿ ಎಂಬಾತ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾ. ಪುಗಳೆಂದಿ ಅವರು ‘ಕೇವಲ ಜೂಜಿನ ಆಟವಷ್ಟೇ ಆಲ್ಲ, ಆನ್‌ಲೈನಲ್ಲಿ ಹಣ ಹೂಡಿ ಆಡುವಂಥ ಎಲ್ಲಾ ಆಟಗಳನ್ನು ರದ್ದು ಮಾಡುವ ಅಗತ್ಯವಿದೆ. ಇಂಥ ಆಟ ಆಡುವ ಮೂಲಕ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಯುವಕರು ತಮ್ಮ ಅಮೂಲ್ಯ ಸಮಯವನ್ನು ಹಾಳುಗೆಡವಿಕೊಳ್ಳುತ್ತಿದ್ದಾರೆ. ಜೊತೆಗೆ ಅಲ್ಲದೆ ಅವರ ಇಂಥ ನಡವಳಿಕೆಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಇಂಥ ಆಟಗಳನ್ನು ನಿಷೇಧಿಸುವ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾನೂನು ರೂಪಿಸಬಹುದಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ ತೆಲಂಗಾಣ ಸರ್ಕಾರ ಸುಗ್ರೀವಾಜ್ಞೆ ಮೂಲಕ ಆನ್‌ಲೈನ್‌ ರಮ್ಮಿ ನಿಷೇಧಿಸಿದ, ತಮಿಳುನಾಡು ಸರ್ಕಾರ ಈಗಾಗಲೇ ಆನ್‌ಲೈನ್‌ ಲಾಟರಿ ನಿಷೇಧಿಸಿರುವ ವಿಷಯವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಯಿತು.