ನವದೆಹಲಿ(ಜು.31): ‘ಕೊರೋನಾ ವೈರಸ್‌ ಹರಡುವುದನ್ನು ತಡೆಯಲು ಭಾರತಕ್ಕೆ ಸಾಮೂಹಿಕ ರೋಗನಿರೋಧಕ ಶಕ್ತಿ (ಹರ್ಡ್‌ ಇಮ್ಯುನಿಟಿ) ಒಂದು ಆಯ್ಕೆಯಲ್ಲ. ಇಲ್ಲಿನ ಜನಸಂಖ್ಯೆ ಹಾಗೂ ಜನಲಕ್ಷಣಕ್ಕೆ ಇದು ಹೊಂದುವುದಿಲ್ಲ. ಹೀಗಾಗಿ ಕೊರೋನಾವನ್ನು ಸಂಪೂರ್ಣ ತಡೆಗಟ್ಟಬೇಕು ಅಂದರೆ ಲಸಿಕೆಯೇ ಬರಬೇಕು’ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೋರೋನಾ ಚಿಕಿತ್ಸಾ ಕ್ರಮದ ಅನುಮಾನಕ್ಕಿಲ್ಲಿದೆ ಉತ್ತರ

‘ರೋಗವೊಂದರಿಂದ ರಕ್ಷಣೆ ಪಡೆಯಲು ಹರ್ಡ್‌ ಇಮ್ಯುನಿಟಿ ಒಂದು ಪರೋಕ್ಷ ಮಾರ್ಗ. ಆದರೆ, ಲಸಿಕೆ ಸಿದ್ಧವಾದ ಮೇಲೆ ಅಥವಾ ದೇಶದ ಬಹುತೇಕ ಜನರು ರೋಗದಿಂದ ಬಳಲಿ ಗುಣಮುಖರಾದ ಮೇಲೆ ಇದು ಅಭಿವೃದ್ಧಿಯಾಗುತ್ತದೆ. ಭಾರತದಷ್ಟುಜನಸಂಖ್ಯೆ ಹೊಂದಿರುವ ದೇಶಗಳಿಗೆ ಹರ್ಡ್‌ ಇಮ್ಯುನಿಟಿ ಆಯ್ಕೆಯಾಗಲಾರದು. ಏಕೆಂದರೆ ಲಕ್ಷಾಂತರ ಜನರು ಸೋಂಕಿಗೆ ತುತ್ತಾಗಬೇಕಾಗುತ್ತದೆ. ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಹಲವರು ಮೃತಪಡುವ ಅಪಾಯವಿರುತ್ತದೆ. ಆದ ಕಾರಣ ಲಸಿಕೆ ತಯಾರಾದ ಮೇಲೆಯೇ ಜನರಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾಗಲು ಸಾಧ್ಯ’ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವಿಶೇಷಾಧಿಕಾರಿ ರಾಜೇಶ್‌ ಭೂಷಣ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಏನಿದು ಹರ್ಡ್‌ ಇಮ್ಯುನಿಟಿ?:
ಬಹುಪಾಲು ಜನರಿಗೆ ಸೋಂಕು ಹಬ್ಬಿದಾಗ ತನ್ನಿಂತಾನೆ ಜನರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಅದನ್ನು ಹರ್ಡ್‌ ಇಮ್ಯುನಿಟಿ ಎನ್ನಲಾಗುತ್ತದೆ.