ಪುದುಕೋಟ್ಟೈ[ಫೆ.19]: ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಕೊರೋನಾ ವೈರಸ್‌ ಸೋಂಕು ದೇಶವನ್ನು ಪ್ರವೇಶಿಸದಂತೆ ನೋಡಿಕೊಳ್ಳಲು ಸರ್ಕಾರಗಳು ಕಠಿಣ ಕ್ರಮಗಳನ್ನು ಕೈಗೊಂಡಿರುವಾಗಲೇ, ಚೀನಾದಿಂದ ಇತ್ತೀಚೆಗೆ ತಮಿಳುನಾಡಿಗೆ ಮರಳಿದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಕೊರೋನಾ ವೈರಾಣು ಸೋಂಕಿನಿಂದಲೇ ಅವರು ಸಾವನ್ನಪ್ಪಿರಬಹುದು ಎಂಬ ಆತಂಕ ವ್ಯಕ್ತವಾಗಿದ್ದು, ಇದು ದೇಶದ ಮೊದಲ ಕೊರೋನಾ ಸಾವು ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿ ಭೀತಿಗೆ ಕಾರಣವಾಗಿದೆ.

ಚೀನಾದಲ್ಲಿ ರೆಸ್ಟೋರೆಂಟ್‌ ಒಂದನ್ನು ನಡೆಸುತ್ತಿರುವ ತಮಿಳುನಾಡಿನ ಪುದುಕೋಟ್ಟೈ ಜಿಲ್ಲೆಯ ಕೊಥಾಯಿಮಂಗಳಂ ಗ್ರಾಮದ 42 ವರ್ಷದ ಶಕ್ತಿ ಕುಮಾರ್‌ ಅವರು ಜಾಂಡೀಸ್‌ ಹಿನ್ನೆಲೆಯಲ್ಲಿ ಇತ್ತೀಚೆಗೆ ತವರಿಗೆ ಮರಳಿದ್ದರು. ಗ್ರಾಮದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ ಚೀನಾದ ತಮ್ಮ ರೆಸ್ಟೋರೆಂಟ್‌ನಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ ಎಂಬ ವಿಷಯ ತಿಳಿದು ಇತ್ತೀಚೆಗೆ ಚೀನಾಕ್ಕೆ ತೆರಳಿದ್ದರು. ವಾಪಸ್‌ ಬಂದಾಗ ಅವರ ಆರೋಗ್ಯ ತೀವ್ರ ರೀತಿಯಲ್ಲಿ ಹದಗೆಟ್ಟಿತ್ತು. ಮದುರೈನ ಖಾಸಗಿ ಆಸ್ಪತ್ರೆಗೆ ದಾಖಲಾದರು. ಆದರೆ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಹೋಗುವುದು ಇನ್ನೆಲ್ಲಿ?: ವುಹಾನ್ ಆಸ್ಪತ್ರೆ ಮುಖ್ಯಸ್ಥನೇ ಕೊರೋನಾ ವೈರಸ್‌ಗೆ ಬಲಿ!

ಮೊದಲೇ ಅನಾರೋಗ್ಯಪೀಡಿತರಾಗಿದ್ದ ಶಕ್ತಿಕುಮಾರ್‌ ಅವರ ದೇಹ ಸ್ಥಿತಿ ಕೊರೋನಾ ವೈರಸ್‌ ಸೋಂಕಿನಿಂದ ವಿಷಮಗೊಂಡು ಸಾವು ಸಂಭವಿಸಿರಬಹುದು ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಕ್ತಿ ಅವರ ವೈದ್ಯಕೀಯ ದಾಖಲೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಶಕ್ತಿ ಅವರ ಗ್ರಾಮದಲ್ಲಿ ಅಧಿಕಾರಿಗಳ ದಂಡೇ ಬೀಡುಬಿಟ್ಟಿದೆ.

ಆದರೆ ಶಕ್ತಿ ಅವರ ಕುಟುಂಬ ಹೇಳುವುದೇ ಬೇರೆ. ಕಳೆದ ಎರಡು ವರ್ಷಗಳಿಂದ ಅವರು ಶ್ವಾಸಕೋಶ ಹಾಗೂ ಯಕೃತ್‌ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದರು. ತಂಜಾವೂರಿನಲ್ಲಿ ಚಿಕಿತ್ಸೆ ಪಡೆದಿದ್ದರು. ಇತ್ತೀಚೆಗೆ ಜಾಂಡೀಸ್‌ ಕೂಡ ಕಾಣಿಸಿಕೊಂಡಿತ್ತು. ಅವರ ಸಾವಿಗೆ ಬೇರೆ ಯಾವುದೇ ಕಾರಣವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳು ವಿಷಯಾಂತರ ಮಾಡಿವೆ ಎಂದು ಕುಟುಂಬದ ಮೂಲಗಳು ದೂಷಿಸಿವೆ.

- ಚೀನಾದಲ್ಲಿ ರೆಸ್ಟೋರೆಂಟ್‌ ನಡೆಸುತ್ತಿದ್ದ ಶಕ್ತಿ ಕುಮಾರ್‌ಗೆ ಜಾಂಡೀಸ್‌

- ಭಾರತಕ್ಕೆ ಬಂದು ಚಿಕಿತ್ಸೆ ಪಡೆದು ಮರಳಿದ್ದ ಶಕ್ತಿಗೆ ಮತ್ತೆ ಅನಾರೋಗ್ಯ

- ಜಾಂಡೀಸ್‌ ಜೊತೆ ಕೊರೋನಾ ವೈರಸ್‌ ಸೇರಿ ಸಾವನ್ನಪಿರುವ ಶಂಕೆ

ಹೋಗುವುದು ಇನ್ನೆಲ್ಲಿ?: ವುಹಾನ್ ಆಸ್ಪತ್ರೆ ಮುಖ್ಯಸ್ಥನೇ ಕೊರೋನಾ ವೈರಸ್‌ಗೆ ಬಲಿ!