ನವದೆಹಲಿ[ಫೆ.24]: ತಂಬಾಕು ಸೇವನೆಯ ಕಾನೂನಾತ್ಮಕ ಕನಿಷ್ಠ ವಯೋಮಿತಿಯನ್ನು ಹಾಲಿ ಇರುವ 18ರಿಂದ 21ಕ್ಕೆ ಹೆಚ್ಚಿಸಲು ಕೇಂದ್ರ ಆರೋಗ್ಯ ಸಚಿವಾಲಯ ಚಿಂತನೆ ನಡೆಸುತ್ತಿದೆ. ಇದು ಜಾರಿಗೆ ಬಂದರೆ 21 ವರ್ಷ ಮೇಲ್ಪಟ್ಟವರು ಮಾತ್ರ ತಂಬಾಕು ಸೇವಿಸಬಹುದು ಅಥವಾ ಧೂಮಪಾನ ಮಾಡಬಹುದು.

ಸಚಿವಾಲಯವು ತಂಬಾಕು ನಿಯಂತ್ರಣ ಕುರಿತಂತೆ ಸಲಹೆ ಬಯಸಿ ಉಪಸಮಿತಿಯೊಂದನ್ನು ರಚಿಸಿತ್ತು. ಉಪಸಮಿತಿ ತನ್ನ ಶಿಫಾರಸನ್ನು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ತಂಬಾಕು ಸೇವನೆಯ ವಯೋಮಿತಿಯನ್ನು ಹೆಚ್ಚಿಸಲು ಶಿಫಾರಸು ಮಾಡಿದೆ. ಅಲ್ಲದೆ, ನಿಷೇಧಿತ ವಲಯದಲ್ಲಿ ಧೂಮಪಾನ ಮಾಡಿದರೆ ಇರುವ 200 ರು. ದಂಡದ ಮೊತ್ತ ಹೆಚ್ಚಿಸಬೇಕು ಎಂಬುದೂ ಶಿಫಾರಸಿನಲ್ಲಿದೆ.

ವಯಸ್ಸಿನ ಮಿತಿ ಏರಿದರೆ ಸಿಗರೆಟ್‌, ತಂಬಾಕು ಖರೀದಿಸಿ ತೆಗೆದುಕೊಂಡು ಬರುವಂತೆ ಪಾಲಕರು ತಮ್ಮ 21 ವರ್ಷ ಕೆಳಗಿನ ಮಕ್ಕಳಿಗೆ ಸೂಚನೆ ಕೂಡ ನೀಡುವಂತಿಲ್ಲ.

‘ಶಾಲೆ-ಕಾಲೇಜುಗಳಲ್ಲಿ ಇದ್ದಾಗ ವಿದ್ಯಾರ್ಥಿಗಳು ಧೂಮಪಾನ, ತಂಬಾಕು ಸೇವನೆ ಚಟಕ್ಕೆ ಅಂಟಿಕೊಂಡುಬಿಡುತ್ತಾರೆ. ಆದರೆ ವಯೋಮಿತಿಯನ್ನು 18ರಿಂದ 21ಕ್ಕೆ ಏರಿಸುವುದರಿಂದ ತಂಬಾಕು ಚಟಕ್ಕೆ ಬೀಳುವ ಯುವಕರ ಸಂಖ್ಯೆ ತಗ್ಗುತ್ತದೆ’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನುಳಿದಂತೆ ತಂಬಾಕು ಉತ್ಪನ್ನಗಳ ಅಕ್ರಮ ವ್ಯಾಪಾರಕ್ಕೆ ಕಡಿವಾಣ ಹಾಕಲು, ಉತ್ಪನ್ನಗಳ ಮೇಲೆ ಬಾರ್‌ಕೋಡ್‌ ಹಾಕುವುದನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಿದೆ. ಇದರಿಂದ ಉತ್ಪನ್ನ ಸಕ್ರಮವೇ, ತೆರಿಗೆಯನ್ನು ಕಟ್ಟಲಾಗಿದೆಯೇ ಎಂದು ಸುಲಭವಾಗಿ ಗುರುತಿಸಬಹುದಾಗಿದೆ.